ಲಕ್ಷದ್ವೀಪದಲ್ಲಿ ಶುಕ್ರವಾರದ ರಜೆ ರದ್ದು : ಶಿಕ್ಷಣ ಇಲಾಖೆ

ಸಾಂದರ್ಭಿಕ ಚಿತ್ರ
ಕವರತ್ತಿ: ಮುಸ್ಲಿಂ ಬಾಹುಳ್ಯದ ಲಕ್ಷದ್ವೀಪದಲ್ಲಿ ಶುಕ್ರವಾರ ವಾರದ ರಜೆ ನೀಡುವ ಸಂಪ್ರದಾಯಕ್ಕೆ ಆಡಳಿತ ವ್ಯವಸ್ಥೆ ತಿಲಾಂಜಲಿ ನೀಡಿದ್ದು, ಇನ್ನು ಮುಂದೆ ಶುಕ್ರವಾರ ಇಲ್ಲಿನ ಶಾಲೆಗಳಿಗೆ ರಜೆ ಇರುವುದಿಲ್ಲ.
ಈ ದ್ವೀಪದಲ್ಲಿ ಶುಕ್ರವಾರದ ರಜೆಯನ್ನು ರದ್ದುಪಡಿಸಿ ರವಿವಾರ ಎಲ್ಲ ಶಾಲೆಗಳಿಗೆ ರಜೆ ನೀಡುವ ಹೊಸ ವೇಳಾಪಟ್ಟಿಯನ್ನು ಲಕ್ಷದ್ವೀಪ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಇದರೊಂದಿಗೆ ಹಲವು ದಶಕಗಳಿಂದ ಧಾರ್ಮಿಕ ನೆಲೆಯಲ್ಲಿ ಶುಕ್ರವಾರ ರಜಾ ಸೌಲಭ್ಯವನ್ನು ಪಡೆಯುತ್ತಿದ್ದ ವಿದ್ಯಾರ್ಥಿಗಳು ಈ ವಿಶೇಷ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.
ಲಕ್ಷದ್ವೀಪದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ಆರು ದಶಕಗಳ ಹಿಂದೆ ಶಾಲೆಗಳು ಆರಂಭವಾದ ದಿನದಿಂದ ಇದುವರೆಗೆ ಶುಕ್ರವಾರ ರಜಾದಿನವಾಗಿತ್ತು. ಶನಿವಾರ ಅರ್ಧ ದಿನ ಮಾತ್ರ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದವು ಎಂದು ಲಕ್ಷದ್ವೀಪ ಸಂಸದ ಮೊಹ್ಮದ್ ಫೈಸಲ್ ಹೇಳಿದ್ದಾರೆ. ಶಾಲೆಗಳ ಸಂಘಟನೆಗಳು, ಜಿಲ್ಲಾಪಂಚಾಯ್ತಿ ಅಥವಾ ಸ್ಥಳೀಯ ಸಂಸದರ ಜತೆ ಚರ್ಚೆ ನಡೆಸದೇ ಏಕಪಕ್ಷೀಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಆಪಾದಿಸಿದ್ದಾರೆ.
"ಇಂಥ ನಿರ್ಧಾರವು ಜನರ ಅಭಿಮತವಾಗಿರಲಿಲ್ಲ; ಇದು ಆಡಳಿತ ಯಂತ್ರದ ಏಕಪಕ್ಷೀಯ ನಿರ್ಧಾರ" ಎಂದು ಫೈಸಲ್ ಹೇಳಿದ್ದಾರೆ. ಸ್ಥಳೀಯ ವ್ಯವಸ್ಥೆಗೆ ಬದಲಾವಣೆಗಳನ್ನು ತರುವಾಗಿ ಸ್ಥಳೀಯ ಜನತೆಯ ಜತೆ ಚರ್ಚಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲ ಸಂಪನ್ಮೂಲಗಳ ಗರಿಷ್ಠ ಬಳಕೆ, ಕಲಿಕಾರ್ಥಿಗಳನ್ನು ಸೂಕ್ತವಾಗಿ ತೊಡಗಿಸಿಕೊಳ್ಳುವುದು ಮತ್ತು ಬೋಧನೆ- ಕಲಿಕಾ ಪ್ರಕ್ರಿಯೆಯನ್ನು ಯೋಜಿತಗೊಳಿಸುವ ಉದ್ದೇಶದಿಂದ ಆಡಳಿತ ಯಂತ್ರ ಶಾಲಾ ವೇಳಾಪಟ್ಟಿಯನ್ನು ಮತ್ತು ಕಾಯಂ ಶಾಲಾ ಚಟುವಟಿಕೆಗಳನ್ನು ಪರಿಷ್ಕರಿಸಿದ ಎಂದು ಅಧಿಕೃತ ಮೂಲಗಳು ಹೇಳಿವೆ.
ಸ್ಥಳೀಯ ವಿದ್ಯಾರ್ಥಿಗಳ ಮತ್ತು ಪೋಷಕರ ಭಾವನೆಗಳನ್ನು ಗೌರವಿಸುವ ದೃಷ್ಟಿಯಿಂದ ಶಿಕ್ಷಣ ಇಲಾಖೆ ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಲಕ್ಷದ್ವೀಪ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಮತ್ತು ಕೌನ್ಸಿಲರ್ ಪಿ.ಪಿ.ಅಬ್ಬಾಸ್ ಅವರು ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ಸಲಹೆಗಾರರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.