ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಪ್ರಕರಣ: ಕುಲದೀಪ್ ಸೆಂಗಾರ್ ಆರೋಪಮುಕ್ತ

ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್
ಹೊಸದಿಲ್ಲಿ: 2019ರಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರು ಅಪಘಾತದಲ್ಲಿ ಸಂತ್ರಸ್ತ ಮಹಿಳೆ ಹಾಗೂ ಆಕೆಯ ವಕೀಲರು ಗಂಭೀರ ಗಾಯಗೊಂಡು ಸಂತ್ರಸ್ತೆಯ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಹಾಗೂ ಐವರು ಸಹ ಆರೋಪಿಗಳನ್ನು ದಿಲ್ಲಿ ನ್ಯಾಯಾಲಯ ಸೋಮವಾರ ಆರೋಪಮುಕ್ತಗೊಳಿಸಿದೆ.
ಸೆಂಗಾರ್, ಜ್ಞಾನೇಂದ್ರ ಸಿಂಗ್, ಕೋಮಲ್ ಸಿಂಗ್, ಅರುಣ್ ಸಿಂಗ್, ರಿಂಕು ಸಿಂಗ್ ಹಾಗೂ ಆದೇಶ್ ಸಿಂಗ್ ವಿರುದ್ಧ ಯಾವುದೇ ಪ್ರಾಥಮಿಕ ಸಾಕ್ಷ್ಯಗಳಿಲ್ಲ ಎಂದು ಗಮನಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.
ಎಸಿಎಂಎಂ ಪಾಂಡೆ ಇತರ ನಾಲ್ವರು ಆರೋಪಿಗಳ ವಿರುದ್ಧ ಆರೋಪಗಳನ್ನು ಹೊರಿಸಿದರು. ನ್ಯಾಯಾಲಯವು ಮಂಗಳವಾರಕ್ಕೆ ಪ್ರಕರಣವನ್ನು ಮುಂದೂಡಿದೆ.
ಪ್ರಕರಣದ ದಾಖಲೆಗಳ ಪ್ರಕಾರ 2019 ರಲ್ಲಿ ಅತ್ಯಾಚಾರ ಸಂತ್ರಸ್ತೆ, ಆಕೆಯ ವಕೀಲರು ಹಾಗೂ ಇಬ್ಬರು ಚಿಕ್ಕಮ್ಮಂದಿರು ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ವೊಂದು ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸಂತ್ರಸ್ತೆಯ ಚಿಕ್ಕಮ್ಮಂದಿರು ಸಾವನ್ನಪ್ಪಿದ್ದರೆ, ಸಂತ್ರಸ್ತೆ ಮತ್ತು ಅವರ ವಕೀಲರಿಗೆ ಗಂಭೀರ ಗಾಯಗಳಾಗಿದ್ದವು.
ಅಪಘಾತದ ಬಳಿಕ ಸೆಂಗಾರ್ ಹಾಗೂ ಆತನ ಸಹಚರರ ವಿರುದ್ಧ ಉತ್ತರಪ್ರದೇಶ ಪೊಲೀಸರು ಹತ್ಯೆ ಪ್ರಕರಣವನ್ನು ದಾಖಲಿಸಿದ್ದರು. ಆದಾಗ್ಯೂ, ಘಟನೆಯ ಕುರಿತು ಸಿಬಿಐ ತನಿಖೆಯು ಮಹಿಳೆ ಹಾಗೂ ಆಕೆಯ ಸಂಬಂಧಿಕರನ್ನು ಕೊಲೆ ಮಾಡಲು ಅಥವಾ ಕೊಲೆ ಯತ್ನಕ್ಕೆ ಕ್ರಿಮಿನಲ್ ಸಂಚು ನಡೆದಿಲ್ಲ ಎಂದು ಕಂಡುಬಂದಿದೆ. ತರುವಾಯ, ಸಂತ್ರಸ್ತ ಮಹಿಳೆಯ ಚಿಕ್ಕಪ್ಪ ಸಿಬಿಐನ ತನಿಖೆಯನ್ನು ಪ್ರಶ್ನಿಸಿ ಪ್ರತಿಭಟನಾ ಮನವಿಯನ್ನು ಸಲ್ಲಿಸಿದ್ದರು, ಈ ಘಟನೆಯು ಸಂತ್ರಸ್ತರು ನ್ಯಾಯಾಲಯದ ಮುಂದೆ ಸಾಕ್ಷ್ಯವನ್ನು ಸಲ್ಲಿಸುವುದನ್ನು ತಡೆಯುವ ಪ್ರಯತ್ನವಾಗಿತ್ತು ಎಂದು ಅವರು ಪ್ರತಿಪಾದಿಸಿದ್ದರು.







