ಕೆಮ್ಮಿನ ಸಿರಪ್ ಸೇವಿಸಿದ ನಂತರ 3 ಮಕ್ಕಳು ಮೃತ್ಯು; ಮೂವರು ವೈದ್ಯರ ಅಮಾನತು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮೊಹಲ್ಲಾ ಚಿಕಿತ್ಸಾಲಯದ ವೈದ್ಯರು ನೀಡಿದ್ದ ಕೆಮ್ಮು ನಿವಾರಕ ಔಷಧ ಸೇವಿಸಿದ ಬಳಿಕ ಮೂವರು ಮಕ್ಕಳು ದಿಲ್ಲಿಯ ಕಲಾವತಿ ಸರಣ್ ಮಕ್ಕಳ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ದಿಲ್ಲಿ ಸರಕಾರವು ಮೂವರು ವೈದ್ಯರ ಸೇವೆಯನ್ನು ವಜಾಗೊಳಿಸಿ ತನಿಖೆಗೆ ಆದೇಶಿಸಿದೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆ ನೀಡಬೇಕು ಮತ್ತು ಮೂವರು ಮಕ್ಕಳ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಒತ್ತಾಯಿಸಿವೆ.
ಅಧಿಕಾರಿಗಳ ಪ್ರಕಾರ, ಕೇಂದ್ರ ಸರಕಾರಿ ಸ್ವಾಮ್ಯದ ದ ಕಲಾವತಿ ಸರನ್ ಮಕ್ಕಳ ಆಸ್ಪತ್ರೆಯು ಜೂನ್ 29 ರಿಂದ ನವೆಂಬರ್ 21 ರವರೆಗೆ ಒಂದರಿಂದ ಆರು ವರ್ಷದೊಳಗಿನ ಮಕ್ಕಳಲ್ಲಿ 16 ಡೆಕ್ಸ್ಟ್ರೋಮೆಥಾರ್ಫಾನ್ ಪ್ರಕರಣಗಳನ್ನು ವರದಿ ಮಾಡಿದೆ.
"ಹೆಚ್ಚಿನ ಮಕ್ಕಳು ಉಸಿರಾಟದ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ದೂರಿದ್ದಾರೆ. ಸಾವನ್ನಪ್ಪಿದ ಮೂವರು ಮಕ್ಕಳು ಕೆಟ್ಟ ಸ್ಥಿತಿಯಲ್ಲಿದ್ದರು" ಎಂದು ಆಸ್ಪತ್ರೆಯ ಹಿರಿಯ ವೈದ್ಯರು ಪಿಟಿಐಗೆ ತಿಳಿಸಿದ್ದಾರೆ.
ಮೂರು ವೈದ್ಯರ ಸೇವೆಯನ್ನು ಸರಕಾರ ರದ್ದುಗೊಳಿಸಿದೆ. ಮಕ್ಕಳ ಸಾವಿನ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಹಾಗೂ ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ ಎಂದು ಆರೋಗ್ಯ ಸಚಿವ ಜೈನ್ ಹೇಳಿದರು.







