ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವತ್ತ ದಾಪುಗಾಲು: ಸಿಎಂ ಬೊಮ್ಮಾಯಿ

ಬೆಳಗಾವಿ, ಡಿ.21: ಕಾವೇರಿ ಕಣಿವೆಯಲ್ಲಿ ಸಂಕಷ್ಟದ ವರ್ಷಗಳಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಮೇಕೆದಾಟು ಯೋಜನೆಯನ್ನು ಕಲ್ಪಿಸಿ ಯೋಜಿಸಿ ಅನುಷ್ಠಾನಗೊಳಿಸುವತ್ತ ದಾಪುಗಾಲನ್ನು ಇಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳರಿಗೆ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಮಧ್ಯ ಪ್ರವೇಶಿಸಿ ಮಾತನಾಡುತ್ತಿದ್ದರು.
ಹೆಚ್ಚುವರಿ ನೀರು ಲಭ್ಯತೆಯ ವರ್ಷಗಳಲ್ಲಿ ಆ ನೀರನ್ನು ಹಿಡಿದಿಟ್ಟುಕೊಂಡು ಕೊರತೆ ಸಂದರ್ಭದಲ್ಲಿ ಬಳಸಿಕೊಳ್ಳುವ ತನ್ಮೂಲಕ ಎರಡೂ ರಾಜ್ಯಗಳಿಗೂ ಸಂಕಷ್ಟದ ಸಂದರ್ಭದಲ್ಲಿ ಅನುಕೂಲವಾಗುವ ಉದಾತ್ತ ಉದ್ದೇಶವನ್ನು ಹೊಂದಲಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.
ಕಾವೇರಿ ಜಲ ವಿವಾದ ನ್ಯಾಯಾಧೀಕರಣ ನೀಡಿದ ಐ ತೀರ್ಪಿನಂತೆ ಎರಡೂ ರಾಜ್ಯಗಳ ಪಾಲಿನ ಹಂಚಿಕೆಯ ವ್ಯಾಪ್ತಿಯೊಳಗೆ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವರು ಉತ್ತರಿಸಿದರು.
ತಮಿಳುನಾಡಿನ ಹಸಿರು ಪೀಠ ನೀಡಿದ್ದ ತಡೆಯಾಜ್ಞೆಯನ್ನು ದಿಲ್ಲಿ ಹಸಿರು ಪೀಠ ತೆರವುಗಳಿಸಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಹೆಚ್ಚಿನ ವಿವರಗಳನ್ನು ಶಾಸಕರಿಗೆ ಒದಗಿಸುವುದಾಗಿ ತಿಳಿಸಿದರು.







