ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ತುರ್ತು ಈಗಿಲ್ಲ: ಕೇಂದ್ರ ಲಸಿಕೀಕರಣ ಸಲಹಾ ಸಮಿತಿ ಸದಸ್ಯ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಮಕ್ಕಳಿಗೆ ಕೋವಿಡ್-19 ಲಸಿಕೆಯನ್ನು ಈಗ ನೀಡುವ ಅಗತ್ಯವಿಲ್ಲ, ಅಂತಹ ತುರ್ತು ಈಗ ಏನೂ ಇಲ್ಲ ಎಂದು ಅಂಕಿಅಂಶಗಳು ತೋರಿಸುತ್ತಿವೆ ಎಂದು ಕೇಂದ್ರ ಸರಕಾರದ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಶನ್ ಇನ್ ಇಂಡಿಯಾ ಸದಸ್ಯ ಡಾ. ಜಯಪ್ರಕಾಶ್ ಮುಳಿಯಿಲ್ ಹೇಳಿದ್ದಾರೆ. ತಮ್ಮ ಸಂಸ್ಥೆಯು ಕೇಂದ್ರ ಸರಕಾರಕ್ಕೆ ಈಗಾಗಲೇ ಈ ಮಾಹಿತಿ ನೀಡಿದೆ, ಮಕ್ಕಳು ಚೆನ್ನಾಗಿದ್ದಾರೆ, ಅವರಿಗೆ ನಾವೀಗ ಲಸಿಕೆ ನೀಡುವ ಅಗತ್ಯವಿಲ್ಲ ಎಂದು ಸರಕಾರಕ್ಕೆ ತಿಳಿಸಲಾಗಿದೆ ಎಂದು ಡಾ ಜಯಪ್ರಕಾಶ್ ಹೇಳಿದ್ದಾರೆ ಎಂದು news18.com ವರದಿ ಮಾಡಿದೆ.
"ಭಾರತದಲ್ಲಿ 12 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳಲ್ಲಿ ಕೋವಿಡ್ನಿಂದ ಒಂದೇ ಒಂದು ಸಾವು ಸಂಭವಿಸಿಲ್ಲ. ಆದರೆ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಂದ ಬಳಲುತ್ತಿದ್ದ ಹಾಗೂ ಕೋವಿಡ್ ಪಾಸಿಟಿವ್ ಆದ ಮಕ್ಕಳಲ್ಲಿ ಸಾವುಗಳು ಸಂಭವಿಸಿವೆ ಆದರೆ ಇವು ಕೋವಿಡ್ನಿಂದ ಉಂಟಾದ ಸಾವೆಂದು ಪರಿಗಣಿಸಲು ಸಾಧ್ಯವಿಲ್ಲ,'' ಎಂದು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಡಾ ಜಯಪ್ರಕಾಶ್ ಹೇಳಿದ್ದಾರೆ.
ಮಕ್ಕಳಿಗೆ ಲಸಿಕೆ ನೀಡಿಕೆ ಕುರಿತು ಕೇಂದ್ರ ಸರಕಾರ ಇನ್ನೂ ತನ್ನ ನಿರ್ಧಾರ ಪ್ರಕಟಿಸಿಲ್ಲದೇ ಇದ್ದರೂ ಅಕ್ಟೋಬರ್ ತಿಂಗಳಿನಲ್ಲಿ ಈ ಕುರಿತು ಮಾತನಾಡಿದ್ದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಮಕ್ಕಳ ಲಸಿಕೆಗೆ ಅನುಮೋದನೆ ನೀಡುವಲ್ಲಿ ಅಥವಾ ಮಕ್ಕಳಿಗೆ ಲಸಿಕೆ ನೀಡಿಕೆ ವಿಚಾರದಲ್ಲಿ ಅವಸರವಿರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.