5 ವರ್ಷಗಳ ಹಿಂದೆ ರಾಜ್ಯದಲ್ಲಿ ಮಹಿಳೆಯರೇ ಹೆಚ್ಚು ನರಳುತ್ತಿದ್ದರು: ಅಖಿಲೇಶ್ ವಿರುದ್ದ ನರೇಂದ್ರ ಮೋದಿ ವಾಗ್ದಾಳಿ
ತಿಂಗಳೊಂದರಲ್ಲಿ 10ನೇ ಬಾರಿ ಉತ್ತರಪ್ರದೇಶಕ್ಕೆ ಪ್ರಧಾನಿ ಭೇಟಿ

ಪ್ರಯಾಗರಾಜ್( ಉತ್ತರ ಪ್ರದೇಶ): ಕಳೆದೊಂದು ತಿಂಗಳಲ್ಲಿ ಉತ್ತರ ಪ್ರದೇಶಕ್ಕೆ 10 ನೇ ಬಾರಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಕಲ್ಯಾಣಕ್ಕೆ ತಮ್ಮ ಸರಕಾರದ ಕೊಡುಗೆಗಳನ್ನು ಪ್ರಸ್ತಾವಿಸಿದರು. ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 18 ರಿಂದ 21 ರವರೆಗೆ ಹೆಚ್ಚಿಸುವ ಯೋಜನೆಯು ಅದರಲ್ಲೊಂದು ಎಂದು ಅವರು ಹೇಳಿದರು.
ಕಾನೂನು ಸುವ್ಯವಸ್ಥೆ ಸುಧಾರಣೆಯ ಮೂಲಕ ಶಿಕ್ಷಣದಿಂದ ಹಣಕಾಸಿನವರೆಗೆ ಮಹಿಳಾ ಸಬಲೀಕರಣವು ತನ್ನ ಸರಕಾರದ ಆದ್ಯತೆಯಾಗಿದೆ ಎಂದರು.
ಪ್ರಯಾಗ್‌ರಾಜ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಐದು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಮಾಫಿಯಾ ರಾಜ್ ಹಾಗೂ ಗೂಂಡಾರಾಜ್ ಇತ್ತು. ಇದರಿಂದ ಮಹಿಳೆಯರು ಹೆಚ್ಚು ನರಳುತ್ತಿದ್ದರು. ಆದರೆ ನೀವು ಆಗ ಏನನ್ನೂ ಹೇಳಲು ಸಾಧ್ಯವಿರಲಿಲ್ಲ. ನೀವು ಪೊಲೀಸ್ ಠಾಣೆಗಳಿಗೆ ಹೋದರೆ, ಫೋನ್ ಕರೆ ಅತ್ಯಾಚಾರಿಗಳು ಮತ್ತು ಅಪರಾಧಿಗಳ ಪರವಾಗಿ ಬರುತ್ತದೆ. ಆದರೆ ಆದಿತ್ಯನಾಥ್ ಅಪರಾಧಿಗಳನ್ನು ಅವರ ಸ್ಥಾನದಲ್ಲಿ ಇರಿಸಿದ್ದಾರೆ” ಎಂದು ಅವರು ಹೇಳಿದರು.
ಮಹಿಳೆಯರ ವಿವಾಹ ವಯೋಮಿತಿಯನ್ನು ಹೆಚ್ಚಿಸಿ ಪುರುಷರಿಗೆ ಸರಿಸಮನಾಗಿ ಇರಿಸುವ ಸರಕಾರದ ಯೋಜನೆಯನ್ನು ಅವರು ಸಮರ್ಥಿಸಿಕೊಂಡರು. ಇದು ಹಲವಾರು ಪಕ್ಷಗಳು ಮತ್ತು ಸಾಮಾಜಿಕ ಹೋರಾಟಗಾರರ ವಿರೋಧದಿಂದಾಗಿ ವಿವಾದಕ್ಕೆ ಈಡಾಗಿದೆ.
ಕೇಂದ್ರ ಸರಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮೊದಲು ಮಹಿಳೆಯರ ಮದುವೆಯ ವಯಸ್ಸು 18 ವರ್ಷವಾಗಿತ್ತು. ಆದರೆ ಹುಡುಗಿಯರು ಸಹ ಹೆಚ್ಚಿನ ಸಮಯವನ್ನು ಅಧ್ಯಯನ ಮಾಡಲು ಬಯಸುತ್ತಾರೆ. ಅದಕ್ಕಾಗಿಯೇ ನಾವು ಮದುವೆಯ ವಯಸ್ಸನ್ನು 21 ಕ್ಕೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.