ಬಿಹಾರ ಮಾಜಿ ಸಿಎಂ ಮಾಂಝಿ ನಾಲಗೆ ಕತ್ತರಿಸಿದವರಿಗೆ 11 ಲಕ್ಷ ರೂ. ನಗದು ಬಹುಮಾನ ಘೋಷಿಸಿದ ಬಿಜೆಪಿ ನಾಯಕ

ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ(PTI)
ಮಧುಬನಿ : ಅರ್ಚಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಅವರ ನಾಲಗೆ ಕತ್ತರಿಸಿದವರಿಗೆ ರೂ. 11 ಲಕ್ಷ ನಗದು ಬಹುಮಾನ ನೀಡುವುದಾಗಿ ಬಿಜೆಪಿ ನಾಯಕ ಗಜೇಂದ್ರ ಝಾ ಘೋಷಿಸಿದ್ದಾರೆ.
ಮಾಂಝಿ ಅವರು ಉದ್ದೇಶಪೂರ್ವಕವಾಗಿ ಸನಾತನ ಧರ್ಮದ ವಿರುದ್ಧ ಸತತ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಝಾ ಆರೋಪಿಸಿದ್ದಾರೆ. "ಮಾಂಝಿ ಅವರಿಗೆ ಹಿಂದು ಸನಾತನ ಧರ್ಮದ ಮೇಲೆ ನಂಬಿಕೆಯಿಲ್ಲದೇ ಇದ್ದರೆ ಅವರು ಮತಾಂತರಗೊಳ್ಳಬೇಕು. ಸಮುದಾಯದ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ ಮಾಂಝಿ ಅವರ ನಾಲಗೆ ಕತ್ತರಿಸುವ ಯಾವುದೇ ಬ್ರಾಹ್ಮಣನ ಪುತ್ರನಿಗೆ ರೂ. 11 ಲಕ್ಷ ನಗದು ಬಹುಮಾನ ನೀಡಲಾಗುವುದು,'' ಎಂದು ಝಾ ಘೋಷಿಸಿದ್ದಾರೆ.
ಮಾಂಝಿ ಅವರ ಹಿಂದುಸ್ತಾನಿ ಆವಾಮಿ ಮೋರ್ಚಾ ಬಿಹಾರದಲ್ಲಿ ಆಡಳಿತ ಎನ್ಡಿಎ ಮಿತ್ರ ಪಕ್ಷವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿಂದುಸ್ತಾನಿ ಆವಾಮಿ ಮೋರ್ಚಾದ ವಕ್ತಾರ ರಿಝ್ವಾನ್, ಮಾಂಝಿ ಅವರ ಮೇಲೆ ದಾಳಿ ಮಾಡುವ ಧೈರ್ಯ ಯಾರಿಗೂ ಇಲ್ಲ ಎಂದಿದ್ದಾರೆ. "ಬಿಜೆಪಿ ನಾಯಕತ್ವ ತನ್ನ ನಾಯಕರನ್ನು ಹದ್ದುಬಸ್ತಿನಲ್ಲಿಡಬೇಕು, ಇಲ್ಲದೇ ಹೋದರೆ ಪರಿಣಾಮ ಕೆಟ್ಟದಾಗುತ್ತದೆ. ಮಾಂಝಿ ಈಗಾಗಲೇ ವಿಷಾಧ ವ್ಯಕ್ತಪಡಿಸಿರುವಾಗ ಮತ್ತೆ ವಿಷಯ ಕೆದಕುವುದು ಅನಗತ್ಯವಾಗಿತ್ತು,'' ಎಂದು ಅವರು ಹೇಳಿದ್ದಾರೆ.