ಮೇಕೆದಾಟು ಯೋಜನೆಗೆ ಸರಕಾರ ಹಿಂದೇಟು ಹಾಕುವುದಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಬೆಳಗಾವಿ, ಡಿ. 21: ಮೇಕೆದಾಟು ಯೋಜನೆ ಆರಂಭಿಸಲು ಸರಕಾರ ಯಾವುದೇ ರೀತಿಯಲ್ಲಿಯೂ ಹಿಂದೇಟು ಹಾಕುವುದಿಲ್ಲ. ಕೇಂದ್ರದಿಂದ ಯೋಜನೆಗೆ ಅನುಮತಿ ಪಡೆದುಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಶರತ್ ಬಚ್ಚೇಗೌಡ ಕೇಳಿದ ಪ್ರಶ್ನೆಗೆ ಸಚಿವ ಕಾರಜೋಳ ಉತ್ತರಿಸುತ್ತಿದ್ದ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ಯೋಜನೆ ಕೇಂದ್ರ ಸರಕಾರದ ಗಮನಕ್ಕೂ ತಂದಿದ್ದೇವೆ. ಈ ಯೋಜನೆ 1996ರಲ್ಲಿ ಆರಂಭವಾಯಿತು. ಐದು ವರ್ಷ ಡಿಪಿಆರ್ ಮಾಡುವುದಕ್ಕೆ ಸಮಯ ತೆಗೆದುಕೊಳ್ಳಲಾಯಿತು. ಗ್ಲೋಬಲ್ ಟೆಂಡರ್ ಎಂದು ಕೊನೆಗೆ ಸ್ಥಳೀಯರಿಗೆ ಟೆಂಡರ್ ನೀಡಿದ್ದಾರೆ ಎಂದರು.
ಕ್ರಿಯಾ ಯೋಜನೆ (ಡಿಪಿಆರ್) ಸಿದ್ಧಪಡಿಸುವುದಕ್ಕೆ 25 ಕೋಟಿ ರೂ.ಖರ್ಚು ಮಾಡಲಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ಒಪ್ಪಿಗೆ ಅಗತ್ಯವಿದೆ. ನಾವು ಯಾವುದೇ ಯೋಜನೆ ತಂದರೂ ತಮಿಳುನಾಡು ಕ್ಯಾತೆ ತೆಗೆಯುವುದು ಸಹಜ.
ಕಾವೇರಿ ನೀರು ನಿರ್ವಹಣಾ ಮಂಡಳಿಯ ಮುಂದಿನ ಸಭೆಯಲ್ಲಿ ತೀರ್ಮಾನ ಆಗುತ್ತದೆ. ಪರಿಸರ ಇಲಾಖೆಯಿಂದ ಒಪ್ಪಿಗೆ ಸಿಕ್ಕ ಬಳಿಕ ನಾವು ಮೇಕೆದಾಟು ಯೋಜನೆಯನ್ನು ನಿಶ್ಚಿತವಾಗಿಯೂ ಜಾರಿಗೆ ತರುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಆರಂಭಕ್ಕೆ ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ, ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರ ಸೂಕ್ಷ್ಮವಾಗಿದೆ. ಇಲ್ಲಿ ಮಾತನಾಡುವುದು ಬೇಡ. ನಾನು ಅವರಿಗೆ ಮಾಹಿತಿ ನೀಡುತ್ತೇನೆ ಎಂದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸಿನ ಸದಸ್ಯ ಕೃಷ್ಣಬೈರೇಗೌಡ, ಡಿ.ಕೆ.ಶಿವಕುಮಾರ್, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿದರು. ಸರಕಾರದ ಗಮನ ಸೆಳೆಯಲು ನಾವು 2022ರ ಜ.9 ರಿಂದ 19ರ ವರೆಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಮೇಕೆದಾಟು ಯೋಜನೆಯಲ್ಲಿ ಸರಕಾರದ ಜೊತೆ ನಾವು ಇದ್ದೇವೆ. ಜಾಗ, ಹಣ, ನೀರು ನಮ್ಮದು ಕೆಲಸ ಆರಂಭ ಮಾಡಿ ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.







