ಜ.1ರಿಂದ ಮದ್ಯವ್ಯಸನ ವಿಮುಕ್ತಿ ಶಿಬಿರ
ಉಡುಪಿ, ಡಿ.21: ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ 29ನೇ ಮದ್ಯವ್ಯಸನ ವಿಮುಕ್ತಿ ಶಿಬಿರವನ್ನು ಜ.1ರಿಂದ ಜ.10ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ 28 ಮದ್ಯವ್ಯಸನ ವಿಮುಕ್ತಿ ಶಿಬಿರಗಳನ್ನು ಆಯೋಜಿಸಿದ್ದು, ಈ ಮೂಲಕ 1800ಕ್ಕೂ ಹೆಚ್ಚು ಮದ್ಯವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ ಶೇ.23ಕ್ಕೂ ಹೆಚ್ಚು ಶಿಬಿರಾರ್ಥಿಗಳು ಮದ್ಯವ್ಯಸನದಿಂದ ಮುಕ್ತರಾಗಿ ಚಿಕಿತ್ಸೆಯನ್ನು ಮುಂದುವರಿಸಿಕೊಂಡು ವ್ಯಸನಮುಕ್ತ ಜೀವವನ್ನು ನಡೆಸುತ್ತಿದ್ದಾರೆ ಎಂದರು.
ಶಿಬಿರವನ್ನು ಜ.1ರಂದು ಬೆಳಗ್ಗೆ 10ಗಂಟೆಗೆ ಭಾರತೀಯ ಮನೋ ವೈದ್ಯ ಕೀಯ ಸಂಘ ಕರ್ನಾಟಕ ಶಾಖೆ ಅಧ್ಯಕ್ಷ ಡಾ.ಕಿರಣ್ ಕುಮಾರ್ ಉದ್ಘಾಟಿಸಲಿ ರುವರು. ಅಧ್ಯಕ್ಷತೆಯನ್ನು ಡಾ.ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಲಿರುವರು. ಜ.10ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಡುಪಿ ನಗರ ಠಾಣಾ ನಿರೀಕ್ಷಕ ಪ್ರಮೋದ್ ಕುಮಾರ್ ಭಾಗವಹಿಸಲಿರುವರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ.ದೀಪಕ್ ಮಲ್ಯ, ಡಾ.ಮಾನಸ, ಮನಶಾಸ್ತ್ರಜ್ಞ ನಾಗರಾಜ್ ಮೂರ್ತಿ ಉಪಸ್ಥಿತರಿದ್ದರು.







