ಪಂಜಿಮೊಗರು: ಶಾಲಾ ಮಕ್ಕಳ ಪೋಷಕರಿಂದ ಪ್ರತಿಭಟನೆ

ಮಂಗಳೂರು, ಡಿ.21: ನಗರದ ಪಂಜಿಮೊಗರಿನ ದ.ಕ.ಜಿ.ಪಂ. ಮಾದರಿ ಹಿ.ಪ್ರಾ. ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಮತ್ತು ಸಹ ಶಿಕ್ಷಕಿಯರಿಂದ ನಡೆಯುತ್ತಿರುವ ಶಾಲಾ ವಿರೋಧಿ, ಶಿಕ್ಷಣ ರೋಧಿ ಕೃತ್ಯಗಳ ವಿರುದ್ಧ ಮಕ್ಕಳ ಪೋಷಕರು ಮಂಗಳವಾರ ದಕ.ಜಿಪಂ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.
ಸಾರ್ವಜನಿಕರು ಕಟ್ಟಿ ಬೆಳೆಸಿದ ಸರಕಾರಿ ಶಾಲೆಯನ್ನು ಶಾಲೆಯ ಶಿಕ್ಷಕಿಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಚ್ಚಲು ಹೊರಟಿದ್ದಾರೆ. ಶಾಲೆಯಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡಬೇಕಾದ ಶಿಕ್ಷಕಿಯರು ಪ್ರತ್ಯೇಕ ಗುಂಪು ಕಟ್ಟಿಕೊಂಡು ಶಾಲೆಯ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಸಮಸ್ಯೆ ಆರಂಭವಾಗಿದ್ದು ಇದೀಗ ಅತಿರೇಕಕ್ಕೆ ತಲುಪಿದೆ.ಮಕ್ಕಳ ಶಿಕ್ಷಣದ ಬಗ್ಗೆ ಬೇಜವಾಬ್ದಾರಿಯನ್ನು ಮುಂದುವರಿಸಿದರೆ ಹಂತಹಂತವಾಗಿ ಹೋರಾಟಗಳನ್ನು ಮುಂದುವರಿಸಲಾಗುವುದು ಎಂದು ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಅಹ್ಮದ್ ಬಶೀರ್, ಶಾಲಾಭಿವೃದ್ಧಿ ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷ ಮೊಯ್ದಿನ್ ಕುಟ್ಟಿ ಎಚ್ಚರಿಸಿದರು.
ಶಿಕ್ಷಣ ಇಲಾಖೆ ಉಪನಿರ್ದೇಶಕರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರಲ್ಲದೆ ಪೋಷಕರ ಸಮಸ್ಯೆಗಳನ್ನು ಆಲಿಸಿದರು. ಎಸ್‌ಡಿಎಂಸಿಸಿ ಸಮನ್ವಯ ವೇದಿಕೆಯ ಮುಖಂಡರಾದ ವೆಂಕಟರಮಣ ಪುಣಚ, ರಾಘವೇಂದ್ರ ಕರಂಬಾರ್, ಸೆಲಿಕತ್, ಹೈರುನ್ನಿಸಾ, ಉಮರ್ ಫಾರೂಕ್, ಶಿಕ್ಷಣಾಸಕ್ತರ ವೇದಿಕೆಯ ಗಣೇಶ್ ಬೋಳೂರು, ರೆಹಮಾನ್ ಖಾನ್ ಕುಂಜತ್ತ್ ಬೈಲ್, ಬಿ.ಕೆ.ಇಮ್ತಿಯಾಝ್, ವಿದ್ಯಾರ್ಥಿ ಮುಖಂಡರಾದ ಚರಣ್ ಶೆಟ್ಟಿ, ಸಂತೋಷ್ ಡಿಸೋಜ, ಮಹಿಳಾ ಸಂಘಟನೆಯ ಮುಖಂಡರಾದ ಭಾರತಿ ಬೋಳಾರ್, ಪ್ರಮೀಳಾ ಕೆ., ಆಶಾ ಬೋಳೂರು ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಮಂಜುಳಾ ಬೇಬಿ, ಸದಸ್ಯರಾದ ಶಹನಾಝ್, ಬಶೀರ್, ಶೇಕಬ್ಬ, ನವೀನ್ ಆಚಾರ್, ಮಾಂತವ್ವ, ಶಾರದಾ, ಕವಿತಾ, ನೌಷಾದ್, ಚಂದ್ರ ನಾಯ್ಕೆ, ಕುಲ್ಸುಬಾನು ಪ್ರತಿಭಟನೆತ ನೇತೃತ್ವ ವಹಿಸಿದ್ದರು.








