ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ; ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ: ಜಾನ್ ಥಾಮಸ್

ಮಂಗಳೂರು : ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹೆಚ್ಚುವರಿಯಾಗಿ ನಿರ್ಮಿಸಲಾಗುತ್ತಿರುವ ಎರಡು ಪ್ಲಾಟ್ ಫಾರ್ಮ್‌ಗಳ (4 ಮತ್ತು 5ನೇ) ಕಾಮಗಾರಿಯನ್ನು 2022ರ ಸೆಪ್ಟಂಬರ್‌ನೊಳಗೆ ಪೂರ್ಣಗೊಳಿಸಲು ಹೆಚ್ಚಿನ ಆದ್ಯತೆ ನೀಡಲಾ ಗುವುದು ಎಂದು ದಕ್ಷಿಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ಜಾನ್ ಥಾಮಸ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ರೈಲ್ವೆ ವ್ಯವಸ್ಥೆ, ಕಾಮಗಾರಿಗಳ ಪರಿಶೀಲನೆ ನಡೆಸಿದ ಬಳಿಕ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಹೊಸ ಪ್ಲಾಟ್ ಫಾರ್ಮ್‌ಗಳ ಕಾಮಗಾರಿ ಪ್ರಗತಿಯಲ್ಲಿದೆ. ಮಾರ್ಚ್ ವೇಳೆಗೆ ಪಿಟ್‌ಲೈನ್ ಕಾಮಗಾರಿ ಪೂರ್ಣಗೊಳ್ಳಲಿದೆ. ಹೆಚ್ಚುವರಿ ಪ್ಲಾಟ್ ಫಾರ್ಮ್‌ಗಳಿಂದಾಗಿ ಜಿಲ್ಲೆಯ ಜನರ ಬೇಡಿಕೆಗೆ ಅನುಗುಣವಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೆಚ್ಚಿನ ರೈಲುಗಳು ಸಂಚರಿಸಲು ಅನುಕೂಲವಾಗಲಿದೆ ಎಂದು ಜಾನ್ ಥಾಮಸ್ ಹೇಳಿದರು.
ಕೊರೋನ ಬಳಿಕ ರೈಲುಗಳ ಪುನಾರಂಭ: ದೇಶದ ಕೋವಿಡ್ ಪ್ರಕರಣಗಳ ಪೈಕಿ ಶೇ.45ಕ್ಕಿಂತ ಹೆಚ್ಚು ಪ್ರಕರಣಗಳು ಕೇರಳದಲ್ಲಿ ದಾಖಲಾಗುತ್ತಿರುವುದರಿಂದ ಹಲವಾರು ಪ್ರಯಾಣಿಕ ರೈಲುಗಳ ಸಂಚಾರ ಇನ್ನೂ ಪುನಾರಂಭಗೊಂಡಿಲ್ಲ. ಕೊರೋನ ಮತ್ತು ಒಮೈಕ್ರಾನ್ ರೂಪಾಂತರಿ ವೈರಸ್ ಆತಂಕದ ಪರಿಸ್ಥಿತಿಗಳನ್ನು ಪರಿಶೀಲಿಸಿದ ನಂತರವೇ ರೈಲು ಸಂಚಾರ ಪುನಾರಂಭಿಸಲು ಯೋಜಿ ಸಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.
ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಸದಸ್ಯರು, ಜಿ.ಎಂ.ಜಾನ್ ಥಾಮಸ್‌ರಿಗೆ ಮನವಿ ಪತ್ರ ಸಲ್ಲಿಸಿ ಹೆಚ್ಚುವರಿ ಪ್ಲಾಟ್ ಫಾರ್ಮ್‌ಗಳ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಈ ಸಂದರ್ಭ ಒತ್ತಾಯಿಸಿದರು.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸದ್ಯ ಇರುವ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಪ್ರವೇಶ ಜಾಗ ಸಾಕಾಗುವುದಿಲ್ಲ. ಮಳೆಗಾಲದಲ್ಲಿ ಕೃತಕ ಪ್ರವಾಹದಿಂದಾಗುವ ತೊಂದರೆ ನಿವಾರಿಸಲು ವಿಶಾಲವಾದ ಪ್ರದೇಶವನ್ನು ಒದಗಿಸಿ ಅತ್ತಾವರ ಕಡೆಯಿಂದ ಎರಡನೇ ಪ್ರವೇಶವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಸಮಿತಿ ಸದಸ್ಯರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಾನ್ ಥಾಮಸ್ ಹೆಚ್ಚುವರಿ ಪ್ಲಾಟ್ ಫಾರ್ಮ್ ಜೊತೆಗೆ ಎರಡನೇ ಆಗಮನದ ಸಭಾಂಗಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.











