ರಾಯಣ್ಣ-ಬಸವಣ್ಣನ ಪ್ರತಿಮೆಗೆ ಅವಮಾನ: ಎಂಇಎಸ್ ನಿಷೇಧಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒತ್ತಾಯ

ಬೆಂಗಳೂರು, ಡಿ.21: ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಎಂಇಎಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ, ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಅವಮಾನ ಮಾಡಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒತ್ತಾಯಿಸಿದೆ.
ಮಂಗಳವಾರ ನಗರದಲ್ಲಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಮಂಡಳಿ ಅಧ್ಯಕ್ಷ ಜಯರಾಜ್, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ, ಬಸವಣ್ಣನ ಪ್ರತಿಮೆಗೆ ಅವಮಾನ ಮಾಡಿರುವ ಕಿಡಿಗೇಡಿಗಳ ಕೃತ್ಯ ಖಂಡನೀಯ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಾಗಬೇಕು ಎಂದು ಹೇಳಿದರು.
ನಾನು ಚಿಕ್ಕ ವಯಸ್ಸಿನಿಂದಲೂ ಎಂಇಎಸ್ ಪುಂಡಾಟಿಕೆಯನ್ನು ನೋಡುತ್ತಿದ್ದೇನೆ. ಇವರ ರಾಜ್ಯವಿರೋಧಿ ಧೋರಣೆಗಳನ್ನು ಸಹಿಸಲು ಸಾಧ್ಯವಿಲ್ಲ. ತುರ್ತಾಗಿ ಸರಕಾರ ಎಚ್ಚೆತ್ತುಕೊಂಡು ಕಠಿಣವಾದ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿರುವ ಕನ್ನಡಿಗರ ಮೇಲೆ ದಬ್ಬಾಳಿಕೆಗಳು ನಡೆಯುತ್ತಿವೆ. ಈ ಬಗ್ಗೆ ರಾಜ್ಯ ಸರಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವುದು ಮತ್ತು ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿರೂಪಗೊಳಿಸುವ ದುರಹಂಕಾರಿಗಳ ಕೃತ್ಯವನ್ನು ಮಟ್ಟಹಾಕಲೇಬೇಕಾಗಿದೆ ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ವಿಧಾನಸೌಧವನ್ನು ಕಟ್ಟಲಾಯಿತು. ಇದನ್ನು ಸಹಿಸದ ಎಂಇಎಸ್ ದಾಂಧಲೆ ನಡೆಸಿರುವುದು ಕಾನೂನು ಕೈಗೆತ್ತಿಕೊಂಡು ಸರಕಾರಿ ವಾಹನಗಳನ್ನು ಜಖಂಗೊಳಿಸಿ ಕನ್ನಡಿಗರ ಅಂಗಡಿಗಳ ಮೇಲೆ ದಾಳಿ ನಡೆಸಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸರಕಾರಕ್ಕೆ ಇದು ಸೂಕ್ತ ಸಮಯವಾಗಿದ್ದು, ಎಂಇಎಸ್ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಬೆಳಗಾವಿಯ ಒಂದು ತುಂಡು ಜಾಗವನ್ನು ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂದರು. ಎಂಇಎಸ್ ಪುಂಡಾಟಿಕೆ ವಿರುದ್ಧ ಎಲ್ಲ ಸಂಘಟನೆಗಳು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಿರುವುದು ಸ್ವಾಗತಾರ್ಹ.
*ಈ ಹಿಂದೆ ಬಿಎಸ್‍ವೈ ಸಿಎಂ ಆಗಿದ್ದಾಗ ಮರಾಠಿ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿ 50 ಕೋಟಿಯನ್ನು ಸರಕಾರ ಬಿಡುಗಡೆ ಮಾಡಿತ್ತು. ಇದನ್ನು ನಾವು ವಿರೋಧಿಸಿದ್ದೆವು. ಈಗ ಎಂಇಎಸ್ ಪುಂಡಾಟಿಕೆಗೆ ಅವರೇ ಬುದ್ಧಿ ಹೇಳಬೇಕು ಎಂದು ಹೇಳಿದರು*.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪುಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿರುವುದು ಸ್ವಾಗತಾರ್ಹ. ಆದರೆ ಶಾಶ್ವತವಾಗಿ ಎಂಇಎಸ್ ನಿಷೇಧಿಸಬೇಕು. ಎಲ್ಲ ರೀತಿಯ ಬೆಂಬಲವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಎಲ್ಲ ಸಂಘಟನೆಗಳು ಬೆಂಬಲ ಕೊಡುತ್ತೇವೆ ಎಂದರು. ಚಿನ್ನೇಗೌಡ, ನಟ ಅಜಯ್ ರಾವ್, ಗಣೇಶ್, ನಾಗಣ್ಣ, ಎನ್.ಎಂ. ಸುರೇಶ್ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಒಗ್ಗಟ್ಟಾಗಿ ನಿಂತು ಹೋರಾಟ ನಡೆಸಬೇಕಿದೆ
‘ಓಲೈಕೆ ರಾಜಕಾರಣ ನಿಲ್ಲಬೇಕು. ನಮ್ಮ ನಾಡು, ಜಲ ವಿಚಾರದಲ್ಲಿ ಅನ್ಯಾಯವಾದಾಗ ನಾವೆಲ್ಲರೂ ಒಗ್ಗಟ್ಟಾಗಿ ನಿಂತು ಹೋರಾಟ ನಡೆಸಬೇಕು ಎಂಬುದನ್ನು ಡಾ. ರಾಜಕುಮಾರ್ ಅವರು ತೋರಿಸಿಕೊಟ್ಟು ಭದ್ರ ಬುನಾದಿ ಹಾಕಿದ್ದಾರೆ.’
ಸಾ.ರಾ.ಗೋವಿಂದು, ಕರ್ನಾಟಕ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ







