ಡಿ. 28ರಂದು ದ.ಕ. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಮ್ಮೇಳನ
ಮಂಗಳೂರು : ದ.ಕ. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಆಶ್ರಯದಲ್ಲಿ ಡಿ. 28ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ಬೆಳಗ್ಗೆ 10 ಗಂಟೆಗೆ ಸಮ್ಮೇಳನದ ಉದ್ಘಾಟನೆಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ನೆರವೇರಿಸುವರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಮೂರು ವರ್ಷಗಳ ಪ್ರಗತಿಯ ವಿವರಗಳನ್ನು ಒಳಗೊಂಡ ವಿಶೇಷ ಸಂಚಿಕೆ ‘ಸಾಧನೆ’ಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅನಾವರಣಗೊಳಿಸುವರು. ಸಮ್ಮೇಳನದ ಮೆರವಣಿಗೆಯನ್ನು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ವೈ. ಭರತ್ ಶೆಟ್ಟಿ ಉದ್ಘಾಟಿಸುವರು. ಮನೋಹರ ಪ್ರಸಾದ್ ಅವರ ಕೃತಿ ಭಾವ ಚಿತ್ರ ಯಾನವನ್ನು ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಬಿಡುಗಡೆಗೊಳಿಸುವರು. ಪತ್ರಿಕಾ ಛಾಯಾಚಿತ್ರ ಪ್ರದರ್ಶನವನ್ನು ಶಾಸಕ ಯು.ಟಿ.ಖಾದರ್ ಬಿಡುಗಡೆಗೊಳಿಸುವರು.
ಕಾರ್ಯಕ್ರಮದಲ್ಲಿ ಕುತ್ಲೂರು ಶಾಲಾ ಮಕ್ಕಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ಅಧ್ಯಕ, ಕ್ರೀಡಾ ಸಮವಸ್ತ್ರ ವಿತರಿಸುವರು. ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಸಿರು ಉಸಿರು ಉದ್ಘಾಟನೆ, ಮೀನುಗಾರಿಕಾ ಸಚಿವ ಎಸ್. ಅಂಗಾರ ಮಡಪ್ಪಾಡಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಶಾಸಕ ಹರೀಶ್ ಪೂಂಜಾ ಅವರು ಕಾರ್ಮಿಕ ಇಲಾಖೆಯ ಕಿಟ್ ವಿತರಣೆ, ವಿಧಾನಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಪುಸ್ತಕ ಪ್ರದರ್ಶನ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡಮಿ ಅಧ್ಯಕ್ಷ ಸದಾಶಿವ ಶೆಣೈ, ಬೆಂಗಳೂರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಏಶ್ಯನ್ ಪತ್ರಕರ್ತರ ಒಕ್ಕೂಟದ ಸಂಚಾಲಕ ಎಚ್.ಬಿ. ಮದನ ಗೌಡ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ಬಳಿಕ ಕರಾವಳಿ ಅಭಿವೃದ್ಧಿ ಕುರಿತಂತೆ ಗೋಷ್ಠಿಗಳು ನಡೆಯಲಿದ್ದು, ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್ರವರು ಶಿಕ್ಷಣ, ಹಿರಿಯ ಪತ್ರಕರ್ತ ವೇಣು ಶರ್ಮಾರವರು ಪತ್ರಿಕ್ಯೋಮ ಹಾಗೂ ಯತೀಶ್ ಬೈಕಂಪಾಡಿಯವರು ಪ್ರವಾಸೋದ್ಯಮದ ಬಗ್ಗೆ ವಿಚಾರ ಮಂಡಿಸುವರು. ಮಧ್ಯಾಹ್ನದ ಬಳಿಕ ಮಾಧ್ಯಮ- ಸಾಮಾಜಿಕ ಹೊಣೆಗಾರಿಕೆ ಕುರಿತಂತೆ ಪ್ರಜಾನುಡಿ ಸಂಪಾದಕ ಲೋಕೇಶ್ ಕಾಯರ್ಗ ಹಾಗೂ ಪತ್ರಕರ್ತೆ ರಾಜಲಕ್ಷ್ಮಿ ಕೋಡಿಬೆಟ್ಟು ಮಾತಾಡಲಿದ್ದಾರೆ.
ವಿವಿಧ ಪತ್ರಿಕೆ, ಮಾಧ್ಯಮ ಸಂಸ್ಥೆಗಳ ಬ್ಯೂರೋ ಮುಖ್ಯಸ್ಥರು ಸಂವಾದದಲ್ಲಿ ಭಾಗವಹಿಸುವರು. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಸನ್ಮಾನ ನೆರವೇರಿಸುವರು. ಮುಖ್ಯ ಅತಿಥಿಗಳಾದಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಶಾಸಕರು, ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಪತ್ರಕರ್ತರು, ಜಿಲ್ಲೆಯ ವಿವಿಧ ಕಾಲೇಜುಗಳ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ 500 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಶ್ರೀನಿವಾಸ ಇಂದಾಜೆ ವಿವರ ನೀಡಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ, ಸಮ್ಮೇಳನ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.