ಡಿ.23ರಿಂದ ಉಡುಪಿ ಮಲ್ಲಿಗೆ ದರ 2100 ರೂ.

ಉಡುಪಿ, ಡಿ.21: ಶಂಕರಪುರದಲ್ಲಿರುವ ಉಡುಪಿ ಮಲ್ಲಿಗೆ ದರ ನಿಗದಿ ಕೇಂದ್ರವು ಡಿಸೆಂಬರ್ 23ರಿಂದ ಅನ್ವಯವಾಗುವಂತೆ ಮಲ್ಲಿಗೆ ಹೂವಿನ ದರವನ್ನು ಅಟ್ಟಿಗೆ (3200 ಬಿಡಿ ಹೂವು) 2,100ರೂ.ಗಳಿಗೆ ಏರಿಸಿದೆ. ಇದನ್ನು ಉಡುಪಿ ಜಿಲ್ಲಾ ಕೃಷಿಕ ಸಂಘವು ಸ್ವಾಗತಿಸಿದೆ.
ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರ ಕುಟುಂಬಗಳು ಮಲ್ಲಿಗೆ ಬೆಳೆಯನ್ನು ನಂಬಿ ಜೀವನ ನಡೆಸುತ್ತಿದೆ. ಪ್ರಸ್ತುತದ ವಿಪರೀತದ ಹವಾಮಾನ ಸ್ಥಿತಿಯಲ್ಲಿ ಈ ಮಲ್ಲಿಗೆ ಬೆಳೆಗಾರ ಕುಟುಂಬಗಳು, ಗಿಡಗಳು ಹಾನಿಗೊಳಗಾಗಿ ಹೂವಿನ ಇಳುವರಿ ಕುಂಠಿತವಾಗಿ ರುವುದರಿಂದ ತೀರಾ ಸಂಕಷ್ಟ ಪರಿಸ್ಥಿತಿಯಲ್ಲಿವೆ. ಇದರ ಜತೆಯಲ್ಲಿ ನಿರ್ವಹಣಾ ವೆಚ್ಚ, ಸಾಗಾಟದ ವೆಚ್ಚಗಳೂ ಏರಿರುವ ಹಿನ್ನೆಲೆಯಲ್ಲಿ ಮಲ್ಲಿಗೆ ಹೂವಿನ ದರ ಏರಿಕೆ ಸಮಂಜಸವಾಗಿದೆ ಎಂದು ಸಂಘ ಅಭಿಪ್ರಾಯ ಪಟ್ಟಿದೆ.
ಎಲ್ಲೆಡೆ ವ್ಯಾಪಾರಿಗಳು, ದಲ್ಲಾಳಿಗಳು ಸೇರಿ ಕೃಷಿಕರನ್ನು ಶೋಷಣೆ ಮಾಡುವವರೇ. ಕೃಷಿಕರಿಗಿಂತ ತಮ್ಮ ಹಿತಾಸಕ್ತಿಗಾಗಿ ಕೃಷಿಕರನ್ನು ಬಳಸಿ ಕೊಳ್ಳುತ್ತಾರೆ. ಇಂತಹವರ ನಡುವೆ ಉಡುಪಿ ಮಲ್ಲಿಗೆ ದರ ನಿಗದಿ ಕೇಂದ್ರ ಮಾತ್ರ ಕೃಷಿಕರ ಹಿತಾಸಕ್ತಿಯನ್ನೇ ಮಾನದಂಡವಾಗಿಟ್ಟುಕೊಂಡು, ಮಲ್ಲಿಗೆ ಬೆಳೆಗಾರರಿಂದ ಹಿಡಿದು, ಹೂವನ್ನು ಕೊಯ್ದು, ಸಂಗ್ರಹ ಮಾಡಿ ಮಾರುಕಟ್ಟೆಗೆ ಒಯ್ಯುವ ತನಕದ ಎಲ್ಲರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ದರ ಏರಿಸಿದೆ.
ಯಾವುದೇ ಹೂವಿನ ಮಾರುಕಟ್ಟೆಗಳಿಗೆ ಹೋಲಿಸಿದರೆ ದೇಶಕ್ಕೇ ಮಾದರಿಯಾಗಿ, ಕಳೆದ 80 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ಮಲ್ಲಿಗೆ ದರ ನಿಗದಿ ಕೇಂದ್ರವು ಯಾವುದೇ ಒಳ ಒಪ್ಪಂದಗಳಿಲ್ಲದೆ ಅತ್ಯಂತ ಪಾರದರ್ಶಕವಾಗಿ, ಸರ್ವಸಮ್ಮತವಾಗಿ ಕೆಲಸ ನಿರ್ವಹಿಸುತ್ತಿರುವುದು ಸಂತೋಷದ ವಿಷಯ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ತಿಳಿಸಿದ್ದಾರೆ.







