ಹೆಣ್ಮಕ್ಕಳ ಮದುವೆಯ ಪ್ರಾಯ 21ಕ್ಕೇರಿಕೆ: 'ವಿಮ್' ಖಂಡನೆ
ಮಂಗಳೂರು, ಡಿ.21: ಹೆಣ್ಮಕ್ಕಳ ಮದುವೆಯ ಪ್ರಾಯವನ್ನು 21ಕ್ಕೇರಿಸುವ ಕೇಂದ್ರ ಸರಕಾರದ ತೀರ್ಮಾನಕ್ಕೆ ವಿಮೆನ್ ಇಂಡಿಯಾ ಮೂವ್‌ಮೆಂಟ್ ರಾಜ್ಯ ಸಮಿತಿ ಸಭೆಯು ಖಂಡಿಸಿದೆ.
ರವಿವಾರ ವಿಮ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಯುವತಿಯರ ಮದುವೆ ವಯಸ್ಸನ್ನು ಹೆಚ್ಚಿಸುವ ಸರಕಾರದ ತೀರ್ಮಾನವು ಮಹಿಳಾ ಸ್ವಾತಂತ್ರ್ಯದ ದಮನವಾಗಿದೆ. ಅನೈತಿಕತೆ ಹೆಚ್ಚಾಗಲು ಸರಕಾರವು ಪ್ರೇರಣೆ ನೀಡಿದಂತಾಗುತ್ತದೆ. 18 ವರ್ಷ ತುಂಬಿದರೆ ಮತ ಚಲಾಯಿಸುವ ಹಕ್ಕು ನೀಡುವ ಸರಕಾರವು ಆಕೆಯ ಮದುವೆಯ ಸ್ವಾತಂತ್ರವನ್ನು ಕಸಿದಿರುವುದು ಖಂಡನೀಯ. ಯಾವುದೇ ಸಾರ್ವಜನಿಕ ಚರ್ಚೆಗೆ ಆಸ್ಪದ ನೀಡದೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿರುವುದು ಅಸಂವಿಧಾನಿಕ. ಇದರ ಸಾಧಕ-ಬಾಧಕಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಭೆ ಒತ್ತಾಯಿಸಿದೆ.
ಧಾರ್ಮಿಕ ಆಯ್ಕೆಯು ಭಾರತೀಯ ಪ್ರಜೆಯ ಸಂವಿಧಾನಿಕ ಹಕ್ಕಾಗಿದೆ. ಇದನ್ನು ಕಸಿಯುವುದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ ಮಹಿಳೆಯರಿಗೆ ಅತ್ಯಂತ ಹೆಚ್ಚು ಅಪಾಯಕಾರಿಯಾಗಲಿದೆ. ಆಮಿಷ, ಬೆದರಿಕೆಗಳ ಮುಖಾಂತರ ಮತಾಂತರಿಸುವವರಿಗೆ ಈಗಾಗಲೇ ಕಾನೂನು ಜಾರಿಯಲ್ಲಿದ್ದು ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ ಎಂದು ಸಭೆ ಆಗ್ರಹಿಸಿದೆ.
ಮಕ್ಕಳು ಮತ್ತು ಮಹಿಳೆಯರ ಅಪೌಷ್ಟಿಕತೆಯು ಕರ್ನಾಟಕವನ್ನು ಕಿತ್ತು ತಿನ್ನುತ್ತಿದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ 5 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳಲ್ಲಿ ಶೇ.36 ಕುಂಠಿತ ಬೆಳವಣಿಗೆ, 5 ವರ್ಷಕ್ಕಿಂತ ಕಡಿಮೆ ಪ್ರಾಯದ ಶೇ.26 ಮಕ್ಕಳು ಕ್ಷೀಣ ಬೆಳವಣಿಗೆ ಹಾಗೂ ಶೇ.10.5 ಮಕ್ಕಳು ತೀವ್ರ ಕ್ಷೀಣತೆ ಹೊಂದಿದ್ದಾರೆ. ಇದು ರಾಜ್ಯವನ್ನು ಕಾಡುವ ಗಂಭೀರ ಸಮಸ್ಯೆಯಾಗಿದ್ದು ಸರಕಾರವು ಅಪೌಷ್ಠಿಕತೆಗೆ ಪೂರಕ ವ್ಯವಸ್ಥೆಯನ್ನು ಮಾಡಬೇಕಿದೆ. ಈ ಮಧ್ಯೆ ಶಾಲೆಗಳಲ್ಲಿ ಮೊಟ್ಟೆ ನೀಡುವುದಕ್ಕೆ ವಿರೋಧ ವ್ಯಕ್ತವಾಗಿದ್ದು ಇದಕ್ಕೆ ಸರಕಾರವು ವಿರೋಧ ಕಿವಿಗೊಡಬಾರದು. ಮೊಟ್ಟೆ ತಿನ್ನದವರಿಗೆ ಪೂರಕ ಆಹಾರ ಒದಗಿಸಲಿ.ಆದರೆ ಮೊಟ್ಟೆ ತಿನ್ನುವ ಮಕ್ಕಳನ್ನು ಪೌಷ್ಟಿಕ ಆಹಾರದಿಂದ ತಡೆಯಬಾರದೆಂದು ಸಭೆಯು ಒತ್ತಾಯಿಸಿದೆ.
ವಿಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಶಾ ಬಜ್ಪೆ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯೆ ನಸ್ರಿಯಾ ಬೆಳ್ಳಾರೆ ವಂದಿಸಿದರು.







