ಭೂ ಹಗರಣ: ಸಚಿವ ಭೈರತಿ ಬಸವರಾಜು, ಆರ್.ಶಂಕರ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ

ಭೈರತಿ ಬಸವರಾಜು
ಬೆಂಗಳೂರು, ಡಿ.21: ಭೂ ಕಬಳಿಕೆ ಆರೋಪ ಸಂಬಂಧ ಸಚಿವ ಭೈರತಿ ಬಸವರಾಜು, ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಭೈರತಿ ಬಸವರಾಜು, ಆರ್.ಶಂಕರ್ ಸೇರಿ ಮೂವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ವಿಚಾರಣಾ ನ್ಯಾಯಾಲಯವು 2021ರ ಸೆ.9ರಂದು ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕೆ.ಆರ್.ಪುರಂನಲ್ಲಿ 22 ಎಕರೆ ಜಮೀನನ್ನು ಕಬಳಿಕೆ ಮಾಡಿರುವ ಕುರಿತಂತೆ ಮಾದಪ್ಪ ಸಲ್ಲಿಸಿದ್ದ ದೂರಿನ ಅನ್ವಯ ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 120-ಬಿ, 420, 427, 465, 467, 468 ಹಾಗೂ 471ರ ಅಡಿ ದೂರು ದಾಖಲಿಸಿ, ವಿಚಾರಣೆ ನಡೆಸಲು ವಿಚಾರಣಾ ನ್ಯಾಯಾಲಯವು ನಿರ್ದೇಶನ ನೀಡಿತ್ತು. ವಿಚಾರಣೆ ಜನವರಿ ಎರಡನೆ ವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.
ಬೆಂಗಳೂರಿನ ಕೆ.ಆರ್.ಪುರಂನಲ್ಲಿ 22 ಎಕರೆ ಜಮೀನನ್ನು ಅಣ್ಣಯ್ಯಪ್ಪ ಎಂಬುವವರಿಂದ 2003ರಲ್ಲಿ ಕಾನೂನು ಬಾಹಿರವಾಗಿ ಖರೀದಿ ಮಾಡಿದ್ದ ಆರೋಪ ಇತ್ತು. ಈ ಬಗ್ಗೆ ಮಾದಪ್ಪ ಎಂಬುವವರು ದೂರು ನೀಡಿದ್ದರು.







