ಕೋಲ್ಕತಾ ಮನಪಾ ಚುನಾವಣೆ: ಟಿಎಂಸಿಗೆ ಭರ್ಜರಿ ಗೆಲುವು

photo:PTI
ಕೋಲ್ಕತಾ,ಡಿ.21: ಕೋಲ್ಕತಾ ಮಹಾನಗರ ಪಾಲಿಕೆ (ಕೆಎಂಸಿ)ಯ ಚುನಾವಣಾ ಫಲಿತಾಂಶಗಳು ಮಂಗಳವಾರ ಪ್ರಕಟಗೊಂಡಿದ್ದು,144 ವಾರ್ಡ್ಗಳ ಪೈಕಿ 134 ವಾರ್ಡ್ಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಟಿಎಂಸಿಯು ಭರ್ಜರಿ ಗೆಲುವನ್ನು ಸಾಧಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಮುಖ್ಯ ಪ್ರತಿಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಮೂರು ಸ್ಥಾನಗಳನ್ನು ಹಾಗೂ ಎಡರಂಗ ಮತ್ತು ಕಾಂಗ್ರೆಸ್ ತಲಾ ಎರಡು ಸ್ಥಾನಗಳನ್ನು ಗೆದ್ದಿವೆ. ಪಕ್ಷೇತರ ಅಭ್ಯರ್ಥಿಗಳು ಮೂರು ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಎಡರಂಗವು ಮತಗಳಿಕೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕುವ ಮೂಲಕ ಸ್ವಲ್ಪ ಸಮಾಧಾನವನ್ನು ಪಡೆದುಕೊಂಡಿದೆ.
2015ರ ಕೆಎಂಸಿ ಚುನಾವಣೆಗಳಲ್ಲಿ ಟಿಎಂಸಿ 124,ಎಡರಂಗ 13,ಬಿಜೆಪಿ 5 ಮತ್ತು ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದಿದ್ದವು.ಕಳೆದ ವರ್ಷ ನಡೆಯಬೇಕಿದ್ದ ಚುನಾವಣೆಯನ್ನು ಕೋವಿಡ್ನಿಂದಾಗಿ ಮುಂದೂಡಲಾಗಿತ್ತು.
ಟಿಎಂಸಿ ಶೇ.71.95,ಎಡರಂಗ ಶೇ.11.13 ಮತ್ತು ಬಿಜೆಪಿ ಶೇ.8.94ರಷ್ಟು ಮತಗಳನ್ನು ಗಳಿಸಿದ್ದರೆ ಕಾಂಗ್ರೆಸ್ಗೆ ಕೇವಲ ಶೇ.4.47ರಷ್ಟು ಮತಗಳು ದಕ್ಕಿವೆ. ಪಕ್ಷೇತರರು ಶೇ.3.25ರಷ್ಟು ಮತಗಳನ್ನು ಪಡೆದಿದ್ದಾರೆ.
ಈ ನಡುವೆ ಟಿಎಂಸಿ ಹಿಂಸಾಚಾರ,ಅಕ್ರಮಗಳನ್ನು ನಡೆಸಿತ್ತು ಎಂದು ಆರೋಪಿಸಿ ಬಿಜೆಪಿ ಮತ್ತು ಸಿಪಿಎಂ ಕಲಕತ್ತಾ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು,ಡಿ.23ರಂದು ವಿಚಾರಣೆ ನಡೆಯಲಿದೆ.







