ಜಾತಿ ನಿಗಮ-ಮಂಡಳಿ ಸ್ಥಾಪನೆ ವಿವಾದ: ಫೆ.2ಕ್ಕೆ ಅಂತಿಮ ವಿಚಾರಣೆ ನಿಗದಿ ಮಾಡಿದ ಹೈಕೋರ್ಟ್

ಬೆಂಗಳೂರು, ಡಿ.21: ರಾಜ್ಯದಲ್ಲಿ ನಿರ್ದಿಷ್ಟ ಜಾತಿ ಹಾಗೂ ಸಮುದಾಯಗಳ ಆಧಾರದಲ್ಲಿ ನಿಗಮ-ಮಂಡಳಿಗಳನ್ನು ರಚಿಸಿರುವುದು ಸಂವಿಧಾನದ ಜಾತ್ಯತೀತ ಕಲ್ಪನೆಗೆ ವಿರುದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸುವುದಾಗಿ ಹೈಕೋರ್ಟ್ ಹೇಳಿದೆ. ಅಲ್ಲದೇ, ಅಂತಿಮ ವಿಚಾರಣೆಯನ್ನು ಫೆ.2ಕ್ಕೆ ನಿಗದಿಪಡಿಸಿದೆ.
ವೀರಶೈವ-ಲಿಂಗಾಯತ ಅಭಿವೃದ್ಧಿ ಮಂಡಳಿ, ಮರಾಠ ಅಭಿವೃದ್ಧಿ ನಿಗಮ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಆರ್ಯವೈಶ್ಯ ಅಭಿವೃದ್ಧಿ ನಿಗಮ ಇನ್ನಿತರ ನಿಗಮ-ಮಂಡಳಿಗಳ ಸ್ಥಾಪನೆಗೆ ಸರಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ವಕೀಲ ಎಸ್.ಬಸವರಾಜು ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ಅವರು ವಾದಿಸಿ, ಚುನಾವಣೆಗಳಲ್ಲಿ ಮತ ಗಳಿಸುವ ಉದ್ದೇಶದಿಂದಲೇ ಜಾತಿ ಆಧಾರಿತ ನಿಗಮ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಜಾತಿ ಲೆಕ್ಕಾಚಾರದಲ್ಲಿ ನಿಗಮ-ಮಂಡಳಿ ಸ್ಥಾಪಿಸಿ, ಅವುಗಳಿಗೆ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಯನ್ನು ಜಾತಿ ಲೆಕ್ಕದಲ್ಲೇ ನೇಮಕ ಮಾಡಲು ಮುಂದಾಗಿದೆ. ಈ ಮೂಲಕ ಸರಕಾರವೇ ಜಾತಿ ಪದ್ಧತಿ ಆಚರಣೆಗೆ ಮುಂದಾಗಿರುವುದು ಸಂವಿಧಾನದ ಜಾತ್ಯತೀತ ಕಲ್ಪನೆಗೆ ವಿರುದ್ಧವಾದುದು ಎಂದು ವಾದಿಸಿದರು.
ಅಲ್ಲದೆ, ರಾಜ್ಯದಲ್ಲಿ ಸುಮಾರು 500 ಹಿಂದುಳಿದ ವರ್ಗಗಳಿವೆ. ಎಸ್ಸಿ, ಎಸ್ಟಿ ಸಮುದಾಯದ ಅಡಿ 50 ಜಾತಿಗಳನ್ನು ಗುರುತಿಸಲಾಗಿದೆ. ಆದರೂ ವೀರಶೈವ-ಲಿಂಗಾಯತ ಅಭಿವೃದ್ಧಿ ಮಂಡಳಿ, ಮರಾಠ ಅಭಿವೃದ್ಧಿ ನಿಗಮ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಆರ್ಯವೈಶ್ಯ ಅಭಿವೃದ್ಧಿ ನಿಗಮ ಇನ್ನಿತರ ನಿಗಮ-ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಈ ಸರಕಾರದ ಆದೇಶ ಸಂವಿಧಾನದ ವಿರೋಧವಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿಗಮ-ಮಂಡಳಿಗಳನ್ನು ರಚಿಸಿರುವುದು ಸಂವಿಧಾನದ ಜಾತ್ಯತೀತ ಕಲ್ಪನೆಗೆ ವಿರುದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸುವುದಾಗಿ ತಿಳಿಸಿ, ವಿಚಾರಣೆಯನ್ನು ಮುಂದೂಡಿತು.







