ಕೇಂದ್ರದಿಂದ ಹಲವಾರು ವಿಷಯಗಳಲ್ಲಿ ಜಮ್ಮು ಕಾಶ್ಮೀರವನ್ನು ದೂರ ಇರಿಸುವ ಯತ್ನ: ಗುಪ್ಕರ್ ಮೈತ್ರಿಕೂಟ
ಪುನರ್ವಿಂಗಡನೆ ಆಯೋಗದ ಕರಡು

ಜಮ್ಮು, ಡಿ. 21: ಕೇಂದ್ರ ಸರಕಾರದ ಪುನರ್ವಿಂಗಡನೆ ಆಯೋಗದ ಕರಡು ಅವಸರವಾಗಿ ಹಲವಾರು ವಿಷಯಗಳಲ್ಲಿ ಜಮ್ಮು ಹಾಗೂ ಕಾಶ್ಮೀರವನ್ನು ದೂರ ಇರಿಸುವ ಪ್ರಯತ್ನವಾಗಿದೆ ಎಂದು ಗುಪ್ಕರ್ ಜನತಾ ಮೈತ್ರಿಕೂಟ (ಪಿಎಜಿಡಿ) ಮಂಗಳವಾರ ಹೇಳಿದೆ. ಪುನರ್ವಿಂಗಡನೆ ಆಯೋಗದ ಕರಡು ಕುರಿತ ಪಿಎಜಿಡಿ ಸಭೆಯ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಎಂ.ವೈ. ತರಿಗಮಿ, ‘‘ಪುನರ್ವಿಗಂಡಣೆಯನ್ನು ರಾಷ್ಟ್ರ ವ್ಯಾಪಿ ಜನಗಣತಿಗೆ ಅನುಗುಣವಾಗಿ ನಡೆಸಬೇಕು ಎಂದು ನಾವು ಮರು ಉಚ್ಚರಿಸುತ್ತಿದ್ದೇವೆ. ಜಮ್ಮು ಹಾಗೂ ಕಾಶ್ಮೀರವನ್ನು ಮುಖ್ಯವಾಹಿನಿಗೆ ತರಲು ಬಯಸುವುದಾಗಿ ಬಿಜೆಪಿ ಸರಕಾರ ಹೇಳುತ್ತಿದೆ. ಆದರೆ, ಅದು ಅವಸರವಾಗಿ ಹಲವು ವಿಷಯಗಳಲ್ಲಿ ಜಮ್ಮು ಹಾಗೂ ಕಾಶ್ಮೀರವನ್ನು ದೂರ ಇರಿಸಲು ಪ್ರಯತ್ನಿಸುತ್ತಿದೆ. ಇದು ಜನರ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ’’ ಎಂದರು.
ತಾರ್ಕಿಕವಾಗಿ ಸ್ಥಾನಗಳ ಸಂಖ್ಯೆ ಹೆಚ್ಚಿಸಬೇಕೆಂಬ ಗುಪ್ಕರ್ ಮೈತ್ರಿಕೂಟದ ಬೇಡಿಕೆಯನ್ನು ಒತ್ತಿ ಹೇಳಿದ ತರಿಗಮಿ, ‘‘ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದರೂ ಕೆಲವೊಂದು ತಾರ್ಕಿಕತೆ ಇರಬೇಕು ಎಂದು ನಾವು ಬಯಸುತ್ತೇವೆ. ಡಾ. ಸಾಹೇಬ್ (ಫಾರೂಕ್ ಅಬ್ದುಲ್ಲಾ) ಹಾಗೂ ಹಸ್ನೈನ್ ಮಸೂದಿ ಸಂಸದರಾಗಿ ಅಲ್ಲಿ (ಪುನರ್ವಿಂಗಡಣೆ ಆಯೋಗದ ಸಭೆ)ಗೆ ತೆರಳಿದ್ದರು. ಜನರ ಆಕಾಂಕ್ಷೆಯಂತೆ ಈ ಕ್ರಮ ಕೈಗೊಂಡಿಲ್ಲ. ಬದಲಾಗಿ ಜಮ್ಮು ಕಾಶ್ಮೀರ ಹಾಗೂ ಲಡಾಕ್ ನಡುವೆ ವಿಭಜನೆ ಸೃಷ್ಟಿಸಲು ಕೈಗೊಳ್ಳಲಾಗಿದೆ’’ ಎಂದರು. ಸಭೆ ಆರಂಭವಾಗುವುದಕ್ಕಿಂತ ಮುನ್ನ ತರಿಗಮಿ, ಪುನರ್ವಿಂಗಡಣೆ ಆಯೋಗದದ ಕರಡನ್ನು ‘‘ವಿಭಜನೀಯ ಹಾಗೂ ಅಸ್ವೀಕಾರಾರ್ಹ’’ ಎಂದರು. ಅಲ್ಲದೆ, ‘‘ಇದು ಸಮುದಾಯಗಳು ಹಾಗೂ ವಲಯಗಳ ಆಧಾರದಲ್ಲಿ ಜಮ್ಮು ಹಾಗೂ ಕಾಶ್ಮೀರವನ್ನು ಇನ್ನಷ್ಟು ವಿಭಜಿಸುತ್ತದೆ’’ ಎಂದರು. ಗುಪ್ಕರ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ನಿವಾಸದಲ್ಲಿ ಮಂಗಳವಾರ ಗುಪ್ಕರ್ ಜನತಾ ಮೈತ್ರಿ ಕೂಟ (ಪಿಎಜಿಡಿ) ನಡೆಯಿತು.







