ಅಮೆರಿಕ: ಟಿಬೆಟ್ ವಿಷಯಕ್ಕೆ ವಿಶೇಷ ಸಂಯೋಜಕರಾಗಿ ಭಾರತೀಯ ಮೂಲದ ಝೆಯಾ ನೇಮಕ

photo:twitter/@UnderSecStateJ
ವಾಷಿಂಗ್ಟನ್, ಡಿ.21: ಟಿಬೆಟ್ ವಿಷಯಕ್ಕೆ ಅಮೆರಿಕದ ವಿಶೇಷ ಸಂಯೋಜಕರಾಗಿ ಭಾರತೀಯ ಮೂಲದ ಅಧಿಕಾರಿ ಝೆಯಾರನ್ನು ನೇಮಿಸಲಾಗಿದ್ದು ಅವರಿಗೆ ಟಿಬೆಟ್ ಕುರಿತ ಒಪ್ಪಂದಕ್ಕೆ ನೆರವಾಗುವ ನಿಟ್ಟಿನಲ್ಲಿ ಚೀನಾ ಮತ್ತು ದಲಾಯಿ ಲಾಮ ಅಥವಾ ಅವರ ಪ್ರತಿನಿಧಿ ನಡುವೆ ವಸ್ತುನಿಷ್ಠ ಮಾತುಕತೆಗೆ ಪ್ರೋತ್ಸಾಹ ನೀಡುವ ಹೊಣೆಗಾರಿಕೆ ವಹಿಸಲಾಗಿದೆ ಎಂದು ವರದಿಯಾಗಿದೆ.
ಟಿಬೆಟನ್ ಕಾರ್ಯನೀತಿ ಕಾಯ್ದೆ 2020ರ ಪ್ರಕಾರ ಟಿಬೆಟ್ ವಿಷಯಕ್ಕೆ ಸಂಬಂಧಿಸಿ ಅಮೆರಿಕ ಸರಕಾರದ ಕಾರ್ಯನೀತಿ, ಕಾರ್ಯಕ್ರಮ ಮತ್ತು ಯೋಜನೆಗಳನ್ನು ಅವರು ಸಂಯೋಜಿಸಲಿದ್ದಾರೆ . ಈಗ ಅವರು ಹೊಂದಿರುವ ನಾಗರಿಕ ಭದ್ರತೆ, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕು ಇಲಾಖೆಯ ಅಧೀನ ಕಾರ್ಯದರ್ಶಿ ಹುದ್ದೆಯ ಜತೆಗೆ ಈ ಹೆಚ್ಚುವರಿ ಹೊಣೆ ವಹಿಸಲಾಗಿದೆ ಎಂದು ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.
ಟಿಬೆಟಿಯನ್ನರ ಮಾನವ ಹಕ್ಕುಗಳು ಹಾಗೂ ಮೂಲಭೂತ ಸ್ವಾತಂತ್ರ್ಯದ ಗೌರವವನ್ನು ಅವರು ಪ್ರೋತ್ಸಾಹಿಸುವ ಜತೆಗೆ ಅವರ ವಿಶಿಷ್ಟ ಐತಿಹಾಸಿಕ, ಭಾಷಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ರಕ್ಷಿಸುವ ಪ್ರಯತ್ನಗಳಿಗೆ ನೆರವಾಗಲಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.





