ಲಕ್ಷದ್ವೀಪ: ಶುಕ್ರವಾರದ ರಜೆ ರದ್ದು ವಿರುದ್ಧ ಪ್ರತಿಭಟನೆ

Photo - the times of india
ಕೊಚ್ಚಿನ್: ಲಕ್ಷದ್ವೀಪದಲ್ಲಿ ವಾರದ ರಜೆಯನ್ನು ಶುಕ್ರವಾರದಿಂದ ರವಿವಾರಕ್ಕೆ ಬದಲಾಯಿಸಿರುವ ಆಡಳಿತಾಧಿಕಾರಿಗಳ ಕ್ರಮದ ವಿರುದ್ಧ ಮುಸ್ಲಿಂ ಬಾಹುಳ್ಯದ ಈ ದ್ವೀಪದಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.
2011ರ ಜನಗಣತಿ ಪ್ರಕಾರ ಲಕ್ಷದ್ವೀಪದ ಒಟ್ಟು ಜನಸಂಖ್ಯೆಯ ಪೈಕಿ ಮುಸ್ಲಿಂ ಜನಸಂಖ್ಯೆ ಶೇಕಡ 96ರಷ್ಟಿದ್ದು, ಹಲವು ದಶಕಗಳಿಂದ ಇಲ್ಲಿ ಶುಕ್ರವಾರ ಶಾಲೆಗಳಿಗೆ ರಜೆ ನೀಡಲಾಗುತ್ತಿತ್ತು.
ಡಿಸೆಂಬರ್ 17ರಂದು ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ಹೊರಡಿಸಿದ ಆದೇಶದ ಅನ್ವಯ ಶಾಲಾ ವೇಳಾಪಟ್ಟಿಯನ್ನು ಮತ್ತು ಕಾಯಂ ಶಾಲಾ ಚಟುವಟಿಕೆಗಳನ್ನು ಪರಿಷ್ಕರಿಸಿದೆ. ಎಲ್ಲ ಇಂಗ್ಲಿಷ್ ಮಾಧ್ಯಮ ಮತ್ತು ಮಲಯಾಳಂ ಮಾಧ್ಯಮ ಶಾಲೆಗಳಿಗೆ ವಿಷಯವಾರು ಸಮಯವನ್ನು ಹಂಚಿಕೆ ಮಾಡಲಾಗಿದ್ದು, ಶುಕ್ರವಾರ ಕೆಲಸದ ದಿನವಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಶುಕ್ರವಾರ ಶಾಲೆಗಳಿಗೆ ರಜೆ ನೀಡುವ ವ್ಯವಸ್ಥೆ ಆರು ದಶಕಗಳಿಂದ ಇತ್ತು. ಜಿಲ್ಲಾ ಪಂಚಾಯತ್, ಚುನಾಯಿತ ಪ್ರತಿನಿಧಿಗಳು ಮತ್ತು ಪಿಟಿಎಗಳ ಜತೆ ಚರ್ಚಿಸದೇ ರಜೆ ಬದಲಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ಏಕಪಕ್ಷೀಯ ಹಾಗೂ ಜನಪ್ರಿಯವಲ್ಲದ ನಿರ್ಧಾರ. ಲಕ್ಷದ್ವೀಪದ ಜನ ಇದನ್ನು ಒಪ್ಪುವುದಿಲ್ಲ ಎಂದು ಸಂಸದ ಮೊಹ್ಮದ್ ಫೈಝಲ್ ಪಿ.ಪಿ. ಹೇಳಿದ್ದಾರೆ.
ಹೊಸ ವ್ಯವಸ್ಥೆಯು ಶುಕ್ರವಾರ ಬೆಳಗ್ಗೆ ಮದ್ರಸಾ ಬೋಧನೆ ವ್ಯವಸ್ಥೆಗೂ ಧಕ್ಕೆ ಉಂಟು ಮಾಡುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.