ಬಲ ಪ್ರದರ್ಶನಕ್ಕಾಗಿ ನಮಾಝ್ ಆಯೋಜನೆ ತಪ್ಪು: ಹರ್ಯಾಣ ಸಿಎಂ

ಮನೋಹರಲಾಲ್ ಖಟ್ಟರ್
ಚಂಡೀಗಢ: ಬಲ ಪ್ರದರ್ಶನಕ್ಕಾಗಿ ಶುಕ್ರವಾರದ ಪ್ರಾರ್ಥನೆಗಳನ್ನು ಮುಕ್ತ ಪ್ರದೇಶಗಳಲ್ಲಿ ನಡೆಸುವುದು ಸರಿಯಲ್ಲ. ಯಾವುದೇ ಸಮುದಾಯಗಳು ಇಂಥ ಧಾರ್ಮಿಕ ಆಚರಣೆಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ನಡೆಸಬಾರದು" ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಮಂಗಳವಾರ ಹೇಳಿಕೆ ನೀಡಿದ್ದಾರೆ.
ಗುರುಗಾಂವ್ನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಶುಕ್ರವಾರದ ಪ್ರಾರ್ಥನೆ ಆಯೋಜಿಸುವುದನ್ನು ಹಿಂದುತ್ವ ಸಂಘಟನೆಗಳು ವಿರೋಧಿಸುತ್ತಿರುವ ಬಗ್ಗೆ ನುಹ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಲ್ತಾಫ್ ಅಹ್ಮದ್ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಾಗ ಸಿಎಂ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂಥ ನಿಯತವಾದ ಧಾರ್ಮಿಕ ಚಟುವಟಿಕೆಗಳನ್ನು ಜನ ಆಯೋಜಿಸಲು ಬಯಸಿದರೆ ಅದನ್ನು ದೇವಾಲಯ, ಮಸೀದಿ, ಚರ್ಚ್ ಹಾಗೂ ಗುರುದ್ವಾರಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದು ಖಟ್ಟರ್ ಸಲಹೆ ಮಾಡಿದರು.
"ಬಲ ಪ್ರದರ್ಶನ ಒಳ್ಳೆಯದಲ್ಲ. ಅದು ಇನ್ನೊಂದು ಸಮುದಾಯದ ಭಾವನೆಗಳನ್ನು ಕೆರಳಿಸುತ್ತದೆ" ಎಂದು ಹೇಳಿದರು. ಮುಖ್ಯಮಂತ್ರಿಗಳು ಇಡೀ ರಾಜ್ಯದ ರಕ್ಷಕರು. ಎಲ್ಲ ಧರ್ಮಗಳ, ನಂಬಿಕೆಗಳ ಜನರ ರಕ್ಷಕರಾಗಿರಬೇಕು ಎಂದು ಕಾಂಗ್ರೆಸ್ ಶಾಸಕ ಆಗ್ರಹಿಸಿದರು.
ಕಳೆದ ಶುಕ್ರವಾರ ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭದ ಬಳಿಕ ಈ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪವಾಗುತ್ತಿರುವುದು ಎರಡನೇ ಬಾರಿ. ಇದಕ್ಕೂ ಮುನ್ನ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಕೂಡಾ ವಿಷಯ ಪ್ರಸ್ತಾಪಿಸಿ, ಸಾರ್ವಜನಿಕ ಪ್ರದೇಶಗಳಲ್ಲಿ ನಮಾಝ್ ಮಾಡುವುದನ್ನು ಆಕ್ಷೇಪಿಸಿದ ಖಟ್ಟರ್ ಕ್ರಮವನ್ನು ಖಂಡಿಸಿದ್ದರು. ಸಿಎಂ ತಮ್ಮ ಹೇಳಿಕೆಯನ್ನು ವಾಪಾಸು ಪಡೆಯಬೇಕು ಎಂದು ಅಹ್ಮದ್ ಮತ್ತು ಮಮ್ಮನ್ ಖಾನ್ ಆಗ್ರಹಿಸಿದ್ದಾರೆ.







