ಸೈಬರ್ ವಂಚನೆಯಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳುವುದು ಹೇಗೆ?

ಸೈಬರ್ ವಂಚನೆ ಕಳೆದ ದಶಕದಿಂದ ನಡೆಯುತ್ತಲೇ ಇದೆ ಕೋವಿಡ್‌ನಿಂದಾಗಿ ಕೆಲಸ ಕಳೆದುಕೊಂಡವರು, ದಿನನಿತ್ಯದ ವಸ್ತುಗಳ ಬೆಲೆ ಆಕಾಶಕ್ಕೇರಿದ್ದರಿಂದಾಗಿ ಸುಲಭವಾಗಿ ಹಣಗಳಿಸಲು 2021ರಲ್ಲಿ ಸೈಬರ್ ವಂಚನೆ ಏರುತ್ತಲೇ ಇದೆ.
ನನ್ನ ವೈಯಕ್ತಿಕ ವಾಟ್ಸ್‌ಆ್ಯಪ್ ಸಂಖ್ಯೆಗೆ ‘‘ನೀವು ಭಾರತದ ಯಾವ ಮೂಲೆಯಲ್ಲಿ ನೆಲೆಸಿದ್ದರೂ ದಿನಕ್ಕೆ 9ರಿಂದ 12 ಸಾವಿರ ರೂ. ಗಳಿಸಲು ಸಾಧ್ಯ. ಈ ಲಿಂಕ್ ಒತ್ತಿ’’ ಎಂದು ನನಗೆ ತಿಳಿಸಲಾಗಿತ್ತು. ದಿನಕ್ಕೆ ರೂ. 12,000 ಎಂದರೆ ತಿಂಗಳಿಗೆ ರೂ. 3.6ಲಕ್ಷ ಮತ್ತು ವಾರ್ಷಿಕ ರೂ. 43,20,000 ಆಗುತ್ತದೆ. ನನ್ನ ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಏನೂ ಅರಿವಿಲ್ಲದ ಈ ಅಪರಿಚಿತ ವ್ಯಕ್ತಿ ಅದೇಗೆ ನನಗೆ ವಾರ್ಷಿಕ ರೂ. 43 ಲಕ್ಷದಷ್ಟು ಸಂಬಳ ಕೊಡಬಲ್ಲ?
ನಾನು ಕೂಡಲೇ ಈ ವಿಷಯವನ್ನು ಸೈಬರ್ ಪೊಲೀಸರ ಗಮನಕ್ಕೆ ತಂದೆ. ಕಂಪ್ಯೂಟರ್ ಸಾಫ್ಟ್‌ವೇರ್‌ನಲ್ಲಿ ನುರಿತ ಸ್ನಾತಕೋತ್ತರ ಪದವಿ ಹೊಂದಿದ ಹಾಗೂ 8 ವರ್ಷಗಳಲ್ಲಿ 400ಕ್ಕಿಂತ ಹೆಚ್ಚಿನ ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚಿದ ಸೈಬರ್ ಪೋಲಿಸ್ ಅಧಿಕಾರಿ ನನಗೆ ತಿಳಿಸಿದ ವಿಷಯಗಳನ್ನು ಪತ್ರಿಕೆಯ ಓದುಗರಿಗೆ ಉಪಯೋಗವಾಗಲೆಂದು ನೀಡುತ್ತಿದ್ದೇನೆ:
ಮೇಲೆ ಕಳಿಸಿದ ಲಿಂಕ್ ನಾನು ಓಪನ್ ಮಾಡಿದ ಕೂಡಲೇ ಇನ್ನೊಂದು ಲಿಂಕ್ ತೆರೆದುಕೊಳ್ಳುತ್ತದೆ. ಆ ಅಂತರ್ಜಾಲ ಪುಟದಲ್ಲಿ ನಾವು ನೋಂದಾಯಿಸಲು ಕ್ಯೂಆರ್ ಕೋಡ್ ಮೂಲಕ ಶುಲ್ಕ ಕಟ್ಟಬೇಕು. ನಂತರ ಟೆಲಿಗ್ರಾಂ ಆ್ಯಪ್‌ನಲ್ಲಿ ಟೀ ಶರ್ಟ್, ಬ್ಯಾಗ್, ಆಭರಣಗಳಂತಹ ವಸ್ತುಗಳ ಮೇಲೆ ಹಣ ಹೂಡಲು ತಿಳಿಸಲಾಗುತ್ತದೆ. ಪ್ರತಿಬಾರಿ ಹಣ ಹೂಡಿದಾಗ 15 ಶೇಕಡಾದಿಂದ 50 ಶೇಕಡಾ ವಾಪಸ್ ಸಿಗಲಿದೆ ಎಂದು ತಿಳಿಸಲಾಗುತ್ತದೆ. ಇದು ವರ್ಚುವಲ್ ಖಾತೆಯಲ್ಲಿ ಜಮಾ ಆಗುತ್ತದೆ. ಇಷ್ಟು ಹಣ ವಾಪಸ್ ಬಂದದ್ದು ಕಂಡ ಅಮಾಯಕರು ಇನ್ನೂ ಹಣ ಹೂಡಲು ಉತ್ತೇಜನ ಸಿಗುತ್ತದೆ. ಆದರೆ ವಾಪಸ್ ಬಂದ ಹಣವನ್ನು ವರ್ಚುವಲ್ ಖಾತೆಯಿಂದ ವಿಥ್‌ಡ್ರಾ ಮಾಡಲು ಹೋದಾಗ ಅದು ಆಗುವುದಿಲ್ಲ. ಆಗ ಅವನಿಗೆ ತಾನು ಮೋಸ ಹೋದದ್ದು ತಿಳಿಯುತ್ತದೆ. ಈ ಮೇಲಿನ ಎಲ್ಲಾ ವಹಿವಾಟುಗಳು ಕ್ಯೂಆರ್ ಕೋಡ್ ನಲ್ಲೇ ನಡೆಯುತ್ತವೆ ಆದುದರಿಂದ ಮೋಸ ಮಾಡಿದ ವ್ಯಕ್ತಿ ಯಾರೆಂದು ತಿಳಿಯುವುದೇ ಇಲ್ಲ.
ಹಾಗಾಗಿ ವಾಟ್ಸ್‌ಆ್ಯಪ್ ಹಾಗೂ ಈ ಮೇಲ್‌ನಲ್ಲಿ ಬಂದ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ. ಖಾಸಗಿ ವಿವರವನ್ನು ಅಪರಿಚಿತ ವ್ಯಕ್ತಿಗಳಿಗೆ ರಿಜಿಸ್ಟರ್ ಮಾಡಲು ನೀಡಬೇಡಿ. ಪರಾಂಬರಿಸಿ ನೋಡದೆ ಇಂತಹ ಲಿಂಕ್‌ಗಳಿಗೆ ಉತ್ತರಿಸಲು ಹೋಗಬೇಡಿ. ಯಾವುದೇ ಬಾರ್ ಕೋಡ್‌ಗಳನ್ನು ಯಾವತ್ತೂ ಸ್ಕಾನ್ ಮಾಡಬೇಡಿ. ನಿಮ್ಮನ್ನು ಸಂದೇಹಾಸ್ಪದ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿದಲ್ಲಿ ಕೂಡಲೇ ಗ್ರೂಪ್‌ನಿಂದ ಹೊರ ಬನ್ನಿ ಹಾಗೂ ಆ ನಂಬರ್ ಬ್ಲಾಕ್ ಮಾಡಿ. ಈ ರೀತಿ ಕ್ಯೂ ಆರ್ ಕೋಡ್ ಮೂಲಕ ಹಣ ಪಾವತಿಸುವ ಯಾವುದೇ ಜಾಹೀರಾತಿಗೆ ಮರುಳಾಗಬೇಡಿ ಸದಾ ಜಾಗ್ರತರಾಗಿರಿ







