ವಸೀಂ ರಿಝ್ವಿಯನ್ನು ಅನುಸರಿಸಿ 34 ಮಂದಿ ಮುಸ್ಲಿಮರು ಹಿಂದೂ ಧರ್ಮಕ್ಕೆ ಮತಾಂತರ ಎಂಬ ಸುದ್ದಿಯ ಸತ್ಯಾಂಶವೇನು?

ಹೊಸದಿಲ್ಲಿ: ಕೇಸರಿ ವಸ್ತ್ರಧಾರಿ ವ್ಯಕ್ತಿಯೊಬ್ಬನ ಸುತ್ತ ಮುಸ್ಲಿಂ ಸಮುದಾಯದ ಜನರ ಒಂದು ಗುಂಪು ನಿಂತಿರುವ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಸಯ್ಯದ್ ವಸೀಂ ರಿಝ್ವಿ ಅವರ ಹಾದಿಯಲ್ಲಿ ನಡೆದು 34 ಮುಸ್ಲಿಂ ಕುಟುಂಬಗಳು ಮತಾಂತರಗೊಂಡಿವೆ ಎಂಬ ವಿವರಣೆಯನ್ನೂ ಈ ಫೋಟೋ ಜತೆಗೆ ನೀಡಲಾಗಿದೆ. ಆದರೆ ಇದು ಸುಳ್ಳು ಸುದ್ದಿಯಾಗಿದೆ ಎಂದು altnews.in ತನ್ನ ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ.
"ವಸೀಂ ರಿಝ್ವಿ ಅವರು ಹಿಂದು ಧರ್ಮಕ್ಕೆ ಮತಾಂತರಗೊಂಡ ನಂತರ ಮುಸ್ಲಿಮರು ಭಯ ಹೊಂದಿಲ್ಲ ಹಾಗೂ ಹಿಂದು ಧರ್ಮಕ್ಕೆ ಸ್ವಯಂಪ್ರೇರಿತರಾಗಿ ಮತಾಂತರಗೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದ 34 ಕುಟುಂಬಗಳ ಸನಾತನ ಹಿಂದು ಧರ್ಮಕ್ಕೆ ಮತಾಂತರಗೊಂಡವು" ಎಂದು ಫೇಸ್ಬುಕ್ ಮತ್ತು ಟ್ವಿಟ್ಟರ್‍ನಲ್ಲಿ ಹರಿದಾಡುತ್ತಿರುವ ಚಿತ್ರದ ಜತೆಗೆ ಬರೆಯಲಾಗಿದೆ.



ರಿಝ್ವಿ ಅವರು ಡಿಸೆಂಬರ್ 6ರಂದು ಹಿಂದು ಧರ್ಮಕ್ಕೆ ಮತಾಂತರಗೊಂಡು ತಾವು ಇನ್ನು ಮುಂದೆ ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ ಎಂಬ ಹೆಸರು ಹೊಂದುವುದಾಗಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದರೆ ಈಗ ವೈರಲ್ ಆಗಿರುವ ಚಿತ್ರ ಇತ್ತೀಚಿನದ್ದಲ್ಲ ಬದಲು 2016ರದ್ದಾಗಿದೆ ಹಾಗೂ ಉರಿಯಲ್ಲಿ ಭಾರತದ ಸೇನಾ ನೆಲೆಯ ಮೇಲೆ ನಡೆದ ದಾಳಿಯನ್ನು ಖಂಡಿಸಿ ಮಥುರಾದ ಶಾಹಿ ಜಮಾ ಮಸೀದಿಯಲ್ಲಿ ನಡೆದ ಪ್ರತಿಭಟನೆಯ ಚಿತ್ರವಾಗಿದೆ ಎಂಬುದು ಚಿತ್ರದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ತಿಳಿದು ಬಂದಿತ್ತು.

ಈ ಚಿತ್ರಕ್ಕೆ ಸಂಬಂಧಿಸಿದ ವರದಿ ಅಮರ್ ಉಜಾಲದಲ್ಲಿ ಪ್ರಕಟವಾಗಿತ್ತು ಹಾಗೂ ಉರಿ ದಾಳಿಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಇಮಾಮ್ ಮೊಹಮ್ಮದ್ ಉಮರ್ ಖಾದ್ರಿ ಹಾಗೂ ಮಹಾಮಂಡಲೇಶ್ವರ್ ನವಲ್ ಗಿರಿ ಭಾಗವಹಿಸಿದ್ದರು ಮತ್ತು ಎರಡೂ ಧರ್ಮಗಳ ಜನರು ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಜತೆಯಾಗಿದ್ದಾರೆ ಎಂದು ಬರೆಯಲಾಗಿತ್ತು. ಇದೇ ಪ್ರತಿಭಟನೆಯ ಸಣ್ಣ ವೀಡಿಯೋ ಕ್ಲಿಪ್ ಕೂಡ ಅಮರ್ ಉಜಾಲ ವೆಬ್‍ಸೈಟ್‍ನಲ್ಲಿದೆ.
ವರದಿ ಕೃಪೆ: Altnews.in







