ಏಶ್ಯನ್ ಚಾಂಪಿಯನ್ಸ್ ಟ್ರೋಫಿ:ಪಾಕಿಸ್ತಾನವನ್ನು ರೋಚಕವಾಗಿ ಮಣಿಸಿ ಕಂಚು ಗೆದ್ದ ಭಾರತ

Photo: TOI
ಢಾಕಾ: ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 4-3 ಗೋಲುಗಳ ಅಂತರದಿಂದ ರೋಚಕವಾಗಿ ಮಣಿಸಿದ ಹಾಲಿ ಚಾಂಪಿಯನ್ ಭಾರತದ ಪುರುಷರ ಹಾಕಿ ತಂಡವು ಕಂಚಿನ ಪದಕವನ್ನು ಜಯಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಪರ ಉಪ ನಾಯಕ ಹರ್ಮನ್ಪ್ರೀತ್ ಸಿಂಗ್(1ನೇ ನಿಮಿಷ), ಸುಮಿತ್(45ನೇ ನಿಮಿಷ), ವರುಣ್ ಕುಮಾರ್(53ನೇ ನಿಮಿಷ) ಹಾಗೂ ಆಕಾಶ್ ದೀಪ್ ಸಿಂಗ್(57ನೇ ನಿಮಿಷ)ತಲಾ ಒಂದು ಗೋಲು ಗಳಿಸಿದರು.
ಪಾಕ್ ಪರವಾಗಿ ಅಫ್ರಾಝ್(10ನೇ ನಿಮಿಷ), ಅಬ್ದುಲ್ ರಾಣಾ(33ನೇ ನಿ.) ಹಾಗೂ ಅಹ್ಮದ್ ನದೀಮ್(57ನೇ ನಿ.)ತಲಾ ಒಂದು ಗೋಲು ಗಳಿಸಿದರು. ಭಾರತವು ಪಾಕಿಸ್ತಾನದ ವಿರುದ್ಧ ಟೂರ್ನಮೆಂಟ್ನಲ್ಲಿ ಎರಡನೇ ಗೆಲುವು ದಾಖಲಿಸಿತು. ಪಾಕ್ ವಿರುದ್ಧ ರೌಂಡ್-ರಾಬಿನ್ ಹಂತದಲ್ಲಿ 3-1 ಅಂತರದಿಂದ ಜಯ ಸಾಧಿಸಿತ್ತು.
ಮಸ್ಕತ್ನಲ್ಲಿ ನಡೆದಿದ್ದ ಕಳೆದ ಆವೃತ್ತಿಯ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಪಂದ್ಯ ರದ್ದಾದ ಕಾರಣ ಭಾರತ ಹಾಗೂ ಪಾಕ್ ತಂಡಗಳು ಟ್ರೋಫಿಯನ್ನು ಹಂಚಿಕೊಂಡಿದ್ದವು. ಹಾಟ್ ಫೇವರಿಟ್ ಆಗಿ ಟೂರ್ನಮೆಂಟ್ನ್ನು ಪ್ರವೇಶಿಸಿದ್ದ ಭಾರತವು ಅಜೇಯ ಗೆಲುವಿನ ದಾಖಲೆಯೊಂದಿಗೆ ರೌಂಡ್ ರಾಬಿನ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಆದರೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವುದರೊಂದಿಗೆ ನಿರಾಸೆಗೊಳಿಸಿದೆ.





