ಪಿರಿಯಾಪಟ್ಟಣ: ಶಾಲಾ ಬಸ್ ನಲ್ಲಿ ಬೆಂಕಿ ಆಕಸ್ಮಿಕ; ತಪ್ಪಿದ ಅನಾಹುತ

ಮೈಸೂರು: ಶಾಲಾ ಮಕ್ಕಳ ಬಸ್ಸೊಂದು ಇದ್ದಕ್ಕಿದ್ದ ಹಾಗೆ ಬೆಂಕಿಗೆ ಹೊತ್ತಿ ಉರಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಡೆದಿದೆ.
ಬಸ್ ನಲ್ಲಿ ಎಂದಿನಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಬಂದ ಚಾಲಕ, ಬಸ್ ನಿಂದ ಮಕ್ಕಳನ್ನು ಕೆಳಗಿಳಿಸಿ ಶಾಲಾ ಆವರಣದಲ್ಲಿ ಇತರೆ ಬಸ್ ಗಳ ಪಕ್ಕದಲ್ಲಿ ನಿಲ್ಲಿಸಿ ಹೊರ ಬಂದ ಸ್ವಲ್ಪ ಹೊತ್ತಿನಲ್ಲೇ ಇದ್ದಕ್ಕಿದ್ದಂತೆ ಬಸ್ ಗೆ ಬೆಂಕಿ ತಗುಲಿ ದಿಢೀರನೇ ಹೊತ್ತಿ ಉರಿಯಲು ಪ್ರಾರಂಭಿಸಿತು.
ಬಸ್ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆತಂಕಕ್ಕೊಳಗಾದ ಇತರೆ ಬಸ್ ನ ಚಾಲಕರು ಪಕ್ಕದಲ್ಲಿ ನಿಲ್ಲಿಸಿದ್ದ ತಮ್ಮ ಬಸ್ ಗಳನ್ನು ಚಲಾಯಿಸಿಕೊಂಡು ಬೇರೆ ಸ್ಥಳಗಳತ್ತ ತೆರಳಿದರು.
ತಕ್ಷಣ ಶಾಲಾ ಸಿಬ್ಬಂದಿ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಸಂಪೂರ್ಣ ಬೆಂಕಿಯನ್ನು ನಂದಿಸಿದರು.
ಬಸ್ ಗೆ ಯಾರಾದರೂ ಬರಂಕಿ ಹಚ್ಚಿದರೆ, ಅಥವಾ ಆಕಸ್ಮಿಕವಾಗಿ ಹೊತ್ತಿಕೊಂಡಿತೆ ಎಂಬುದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
ಒಂದು ವೇಳೆ ಬಸ್ ಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಾಗಿದ್ದರೆ, ಮಕ್ಕಳು ಬಸ್ ನಲ್ಲಿ ಪ್ರಯಾಣ ಮಾಡುವಾಗ ಈ ಘಟನೆ ನಡೆದಿದ್ದರೆ ಬಾರೀ ದುರಂತ ನಡೆಯುತ್ತಿತ್ತು ಎಂದು ಪೋಷಕರುಗಳು ಆತಂಕ ವ್ಯಕ್ತಪಡಿಸಿದ್ದಾರೆ.







