ನಗರ ಸ್ಥಳೀಯ ಸಂಸ್ಥೆಗಳಲ್ಲಿ 2064 ಪೌರ ಕಾರ್ಮಿಕರ ನೇರ ನೇಮಕ: ಸಚಿವ ಎಂ.ಟಿ.ಬಿ. ನಾಗರಾಜ್

ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ಸಚಿವ ಎಂ.ಟಿ.ಬಿ. ನಾಗರಾಜ್
ಬೆಳಗಾವಿ, ಡಿ.22: ನಗರ ಸ್ಥಳೀಯ ಸಂಸ್ಥೆಗಳಲ್ಲಿ 2064 ಪೌರ ಕಾರ್ಮಿಕರ ನೇರ ನೇಮಕಾತಿಗೆ ರಾಜ್ಯ ಸರಕಾರ ಅನುಮತಿ ನೀಡಿದೆ. ಜಿಲ್ಲಾಧಿಕಾರಿಗಳು ಈ ನೇಮಕಾತಿಗಳನ್ನು ಮಾಡುವರು ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜ್ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಸೇವಾ ಖಾಯಮಾತಿಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ಪೌರಾಡಳಿತ ಇಲಾಖೆಯ ಪೌರ ಕಾರ್ಮಿಕರು, ಲೋಡರ್ಗಳು, ವಾಟರ್ ಮ್ಯಾನ್ಗಳು, ಕಸದ ಆಟೋ ಚಾಲಕರು, ಕಂಪ್ಯೂಟರ್ ಆಪರೇಟರ್ ಗಳು, ಯು.ಜಿ.ಡಿ. ಕಾರ್ಮಿಕರು ಮತ್ತು ಕಚೇರಿ ಸಹಾಯಕರ ಅಹವಾಲನ್ನು ಆಲಿಸಿದ ನಂತರ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕೆಳಹಂತದ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಲೋಡರ್, ಕ್ಲೀನರ್ ಮತ್ತು ಗ್ಯಾಂಗ್ಮನ್ಗಳಿಗೆ ವೇತನವನ್ನು ನೇರ ಪಾವತಿ ಮೂಲಕ ನೀಡುವ ಬಗ್ಗೆ ರಾಜ್ಯ ಸರಕಾರ ಮುಕ್ತ ಮನಸ್ಸು ಹೊಂದಿದೆ ಎಂದು ನಾಗರಾಜ್ ತಿಳಿಸಿದರು.





