ವೋಟರ್ ಐಡಿ ಜೊತೆ ಆಧಾರ್ ಲಿಂಕ್ ʼಸ್ವಯಂಪ್ರೇರಿತʼ ಎಂದು ಕೇಂದ್ರ ಹೇಳುತ್ತಿದ್ದರೂ ಮಸೂದೆ ಇದಕ್ಕೆ ತದ್ವಿರುದ್ಧ !
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಡಿ.21: ಲೋಕಸಭೆಯು ಸೋಮವಾರ ಅಂಗೀಕರಿಸಿರುವ ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ, 2021 ಹೊಸ ಮತದಾರರಿಂದ ಗುರುತಿನ ಪುರಾವೆಯಾಗಿ ಆಧಾರ್ ಸಂಖ್ಯೆಯನ್ನು ಕೇಳಲು ಮತದಾರರ ಪಟ್ಟಿ ನೋಂದಣಾಧಿಕಾರಿಗಳಿಗೆ ಅವಕಾಶ ಕಲ್ಪಿಸಿದೆ. ಅಧಿಕಾರಿಗಳು ಈಗಾಗಲೇ ನೋಂದಾಯಿತ ಮತದಾರರ ಗುರುತನ್ನು ದೃಢಪಡಿಸಿಕೊಳ್ಳಲೂ ಆಧಾರ್ ಸಂಖ್ಯೆಯನ್ನು ಬಳಸಿಕೊಳ್ಳಬಹುದಾಗಿದೆ.
ಮತದಾರರ ಭಾವಚಿತ್ರ ಸಹಿತ ಗುರುತು ಚೀಟಿ (ವೋಟರ್ ಐಡಿ)ಯೊಂದಿಗೆ ಆಧಾರ್ ವಿವರಗಳ ಜೋಡಣೆಯು ಕಡ್ಡಾಯವಲ್ಲ,ಅದು ಸ್ವಯಂಪ್ರೇರಿತವಾಗಿರಲಿದೆ ಎಂದು ಸರಕಾರವು ಹೇಳುತ್ತಿದೆ. ಆದರೆ ಮಸೂದೆಯಲ್ಲಿನ ವಿಷಯವು ಇದಕ್ಕೆ ವಿರುದ್ಧವನ್ನು ಸೂಚಿಸುತ್ತಿದೆ. ಯಾವುದೇ ವ್ಯಕ್ತಿಗೆ ಆಧಾರ್ ಸಂಖ್ಯೆಯನ್ನು ಒದಗಿಸಲು ಸಾಧ್ಯವಾಗದಿದ್ದರೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ ಮತ್ತು ಪಟ್ಟಿಯಲ್ಲಿನ ನಮೂದುಗಳನ್ನು ಅಳಿಸುವಂತಿಲ್ಲ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಆದರೆ ಈ ನಿಬಂಧನೆಗೆ ‘ಸೂಚಿಸಬಹುದಾದ ತೃಪ್ತಿಕರ ಕಾರಣದಿಂದಾಗಿ’ ಎಂಬ ಪದಗುಚ್ಛವನ್ನು ಸೇರಿಸಲಾಗಿದೆ.
ಈ ಪದಗುಚ್ಛವು ವ್ಯಕ್ತಿಯು ತನ್ನ ಆಧಾರ್ ಅನ್ನು ಒದಗಿಸುವುದರಿಂದ ವಿನಾಯಿತಿ ನೀಡುವ ‘ತೃಪ್ತಿಕರ ಕಾರಣ’ವನ್ನು ನಿಗದಿಗೊಳಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡುತ್ತದೆ. ಈ ವ್ಯಕ್ತಿಗಳಿಗೆ ಸರಕಾರವು ನಂತರ ಸೂಚಿಸಬಹುದಾದ ಪರ್ಯಾಯ ದಾಖಲೆಯನ್ನು ಒದಗಿಸಲು ಅವಕಾಶ ನೀಡಲಾಗುತ್ತದೆ.
ಇದು ಸ್ವಯಂಪ್ರೇರಿತ ಪ್ರಕ್ರಿಯೆಯಾಗಿರುವುದಿಲ್ಲ ಎಂದು ವಕೀಲರು ಅಭಿಪ್ರಾಯಿಸಿದ್ದಾರೆ.
ಜನರು ತಮ್ಮ ಮತದಾನದ ಹಕ್ಕು ಚಲಾಯಿಸಲು ಆಧಾರ್ ಅನ್ನು ತೋರಿಸುವುದು ಕಡ್ಡಾಯವಾಗಬಹುದು ಎನ್ನುವುದನ್ನು ಮಸೂದೆಯು ಸ್ಪಷ್ಟವಾಗಿ ಬೆಟ್ಟು ಮಾಡುತ್ತಿದೆ ಎಂದು ಹೇಳಿದ ಇಂಟರ್ನೆಟ್ ಫ್ರೀಡಂ ಫೌಂಡೇಷನ್ ನ ಕಾರ್ಯಕಾರಿ ನಿರ್ದೇಶಕ ಅಪಾರ ಗುಪ್ತಾ ಅವರು, ಈ ‘ಸಾಕಷ್ಟು ಕಾರಣ’ ಏನಿರಲಿದೆ ಎನ್ನುವುದನ್ನು ಭವಿಷ್ಯದ ನಿಯಮಗಳು ನಿರ್ಧರಿಸಲಿವೆ. ಆದಾಗ್ಯೂ ಇಂತಹ ಸಾಕಷ್ಟು ಕಾರಣಕ್ಕೆ ಆಧಾರವಾಗುವ ಅಂಶಗಳನ್ನು ಸ್ಪಷ್ಟವಾಗಿ ಹೇಳಲಾಗಿಲ್ಲ. ಹೀಗಾಗಿ ಈ ಜೋಡಣೆ ಪ್ರಕ್ರಿಯೆ ಸ್ವಯಂಪ್ರೇರಿತವಲ್ಲ ಎಂದರು.
ಆಧಾರ್ ನಿರಾಕರಣೆಯ ಪರಿಣಾಮಗಳು ಗೊತ್ತಾದ ಬಳಿಕ ಮಸೂದೆಯ ನಿಖರವಾದ ಮಹತ್ವವು ಸ್ಪಷ್ಟವಾಗಲಿದೆ ಎಂದು ಹೇಳಿದ ವಕೀಲ ಪ್ರಶಾಂತ ರೆಡ್ಡಿ ಅವರು,ತಮ್ಮ ಆಧಾರ್ ವಿವರಗಳನ್ನು ಸಲ್ಲಿಸದವರಿಗೆ ಸರಕಾರವು ದಂಡವನ್ನು ವಿಧಿಸಲಿದೆ. ಹೀಗಾಗಿ ಎಲ್ಲ ಪ್ರಾಯೋಗಿಕ ಉದ್ದೇಶಗಳಿಗೆ ಅದು ಕಡ್ಡಾಯವಾಗಲಿದೆ ಎಂದರು.
ಜನರು ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ನೋಂದಣಾಧಿಕಾರಿಗಳಿಗೆ ಬಹಿರಂಗಗೊಳಿಸದಿರುವ ಹಕ್ಕನ್ನು ಹೊಂದಿದ್ದಾರೆ ಎಂದು ಮಸೂದೆಯಲ್ಲಿ ನಿರ್ದಿಷ್ಟವಾಗಿ ಹೇಳಲಾಗಿಲ್ಲ. ಹೀಗಾಗಿ ಈ ಪ್ರಕ್ರಿಯೆ ಸ್ವಯಂಪ್ರೇರಿತವಾಗಿರುತ್ತದೆ ಎಂದು ತಾನು ಭಾವಿಸುವುದಿಲ್ಲ ಎಂದರು.
ಸರಕಾರವು ಭವಿಷ್ಯದಲ್ಲಿ ಹೇರಬಹುದಾದ ಷರತ್ತುಗಳ ಸ್ವರೂಪದ ಬಗ್ಗೆ ಗುಪ್ತಾ ಮತ್ತು ರೆಡ್ಡಿ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ.
ಸರಕಾರವು ಆಧಾರ್ ಸಂಖ್ಯೆಯನ್ನು ಒದಗಿಸದಿರುವ ಪರ್ಯಾಯವನ್ನು ಆಯ್ಕೆ ಮಾಡಿಕೊಳ್ಳಲು ಮತದಾರರಿಗೆ ಅವಕಾಶ ನೀಡಿದರೂ ಈ ಆಯ್ಕೆಯನ್ನು ಎಷ್ಟೊಂದು ಕಠಿಣವಾಗಿಸಬಹುದು ಎಂದರೆ ಪ್ರಾಯೋಗಿಕವಾಗಿ ಅದು ಅಸ್ತಿತ್ವದಲ್ಲಿಯೇ ಇರುವುದಿಲ್ಲ ಎಂದ ಗುಪ್ತಾ, ಆನ್ಲೈನ್ನಲ್ಲಿ ಮತದಾರರ ದೃಢೀಕರಣಕ್ಕೆ ಅವಕಾಶ ನೀಡಬಹುದು,ಆದರೆ ಆಧಾರ್ ಅನ್ನು ಒದಗಿಸದಿದ್ದರೆ ಸಲ್ಲಿಸಲಾದ ಇತರ ಗುರುತಿನ ಪುರಾವೆಯನ್ನು ಪ್ರಾದೇಶಿಕ ಚುನಾವಣಾ ಅಧಿಕಾರಿಗಳು ಭೌತಿಕವಾಗಿ ದೃಢೀಕರಿಸಬೇಕಾಗುತ್ತದೆ,ಹೀಗಾಗಿ ಪರ್ಯಾಯ ಆಯ್ಕೆಯೂ ಕಾರ್ಯಸಾಧ್ಯವಾಗುವುದಿಲ್ಲ ಎಂದರು.
ಸರಕಾರವು ಮತದಾರರು ಆಧಾರ್ ಸಲ್ಲಿಸದಿರುವುದಕ್ಕೆ ಕಠಿಣ ಷರತ್ತುಗಳನ್ನು ವಿಧಿಸಬಹುದು. ಸರಕಾರದ ಕಾರ್ಯ ವೈಖರಿ ಗೊತ್ತೇ ಇರುವುದರಿಂದ ಅದು ‘ಸಾಕಷ್ಟು ಕಾರಣ’ವನ್ನು ಅತ್ಯಂತ ಸಂಕುಚಿತವಾಗಿ ವ್ಯಾಖ್ಯಾನಿಸಬಹುದು ಮತ್ತು ಇದು ನಿಮಗೆ ಆಧಾರ್ ಸಲ್ಲಿಕೆಯನ್ನು ನಿರಾಕರಿಸಲು ಅತ್ಯಂತ ಕಡಿಮೆ ಅವಕಾಶವನ್ನು ನೀಡುತ್ತದೆ ಎಂದು ಹೇಳಿದ ರೆಡ್ಡಿ, ಕಾರ್ಯಾಂಗಕ್ಕೆ ಅತಿಯಾದ ಶಾಸಕಾಂಗ ಅಧಿಕಾರವನ್ನು ನೀಡಿರುವುದಕ್ಕಾಗಿ ಈ ಕಾನೂನನ್ನು ಪ್ರಶ್ನಿಸಬಹುದಾಗಿದೆ. ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯು ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ವಿಧಾನವನ್ನು ಬದಲಿಸುತ್ತದೆ,ಹೀಗಾಗಿ ಅದನ್ನು ಶಾಸಕಾಂಗವೇ ರೂಪಿಸಬೇಕು ಮತ್ತು ಅದಕ್ಕಾಗಿ ಕಾರ್ಯಾಂಗವನ್ನು ನಿಯೋಜಿಸಬಾರದು ಎಂದರು.