ಬಸ್ಸು ಮಾಲಕರ ಸಂಘ ನೀಡಿದ್ದ ಅಂಗಿ ಧರಿಸಿಯೇ ಪದ್ಮಶ್ರೀ ಪ್ರಶಸ್ತಿ ಪಡೆಯಲು ತೆರಳಿದ್ದೆ: ಹರೇಕಳ ಹಾಜಬ್ಬ
ಪೂರ್ವ ವಲಯ ಬಸ್ ಮಾಲಕರ ಒಕ್ಕೂಟದಿಂದ ಸನ್ಮಾನ

ಮಂಗಳೂರು, ಡಿ. 22: ವರ್ಷದ ಹಿಂದೆ ದ.ಕ. ಜಿಲ್ಲಾ ಬಸ್ ಮಾಲಕರ ಸಂಘದವರು ನನ್ನನ್ನು ಸನ್ಮಾನಿಸಿ ಎರಡು ಅಂಗಿಗೆ ಬೇಕಾದ ವಸ್ತ್ರ, ಒಂದು ಲಕ್ಷ ರೂ. ಮತ್ತು ಒಂದು ಚೀಲ ಕೊಟ್ಟಿದ್ದರು. ಮೊನ್ನೆ ರಾಷ್ಟ್ರಪತಿಯವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಅದೇ ವಸ್ತ್ರವನ್ನು ಹೊಲಿಸಿ ಹಾಕಿ ತೆರಳಿದ್ದೆ ಎಂದು ಹರೇಕಳ ಹಾಜಬ್ಬ ಹೇಳಿದ್ದಾರೆ.
ಪೂರ್ವ ವಲಯ ಬಸ್ ಮಾಲಕರ ಒಕ್ಕೂಟ ವತಿಯಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ನನ್ನ ಜೀವನದ ಹೆಚ್ಚಿನ ದಿನಗಳನ್ನು ಬಸ್ ನಿಲ್ದಾಣದಲ್ಲೇ ಕಳೆದಿದ್ದೆ. ಈ ವೇಳೆ ಹಲವು ಬಸ್ ಮಾಲಕರು ನನ್ನಿಂದ ಕಿತ್ತಳೆ ಹಣ್ಣು ಖರೀದಿಸಿ ನೆರವಾಗಿದ್ದರು. ನಮ್ಮೂರಿಗೆ ತೆರಳುವ ಯಾವುದೇ ಬಸ್ಸಿನ ನಿರ್ವಾಹಕರು ನನ್ನಿಂದ ಟಿಕೆಟ್ ಹಣವನ್ನು ಕೂಡ ಪಡೆದಿಲ್ಲ ಎಂದು ಹರೇಕಳ ಹಾಜಬ್ಬ ಹೇಳಿದರು.
ಪತ್ರಕರ್ತ ಗುರುವಪ್ಪ ಬಾಳೇಪುಣಿ ಮಾತನಾಡಿ ಅತ್ಯಂತ ಸರಳ ಸಜ್ಜನಿಕೆ ವ್ಯಕ್ತಿತ್ವದ, ವಿಶಾಲ ಮನೋಭಾವದ ಹರೇಕಳ ಹಾಜಬ್ಬ ಇಂದು ಸ್ಥಳೀಯ ಮಾಧ್ಯಮದಿಂದ ಹಿಡಿದು ಅಂತಾರಾಷ್ಟ್ರೀಯ ಮಾಧ್ಯಮದಲ್ಲೂ ಮಿಂಚಿದ್ದಾರೆ. ಇದು ತುಳುನಾಡಿಗೆ ಸಂದ ಗೌರವ. ಹಾಜಬ್ಬರ ಬಗ್ಗೆ ಅಧ್ಯಯನ ಮಾಡಿದರೆ ಹಲವು ಪಿಎಚ್‌ಡಿಗಳನ್ನೇ ಮಾಡಬಹುದು. ಅವರ ವ್ಯಕ್ತಿತ್ವ ಅಂತಹದ್ದು ಎಂದು ಬಣ್ಣಿಸಿದರು.
ಪೂರ್ವ ವಲಯ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ ಶೇಷಪ್ಪ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ ಸಿಟಿ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯರಾಮ್ ಶೇಖ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜ್ ವರ್ಮ ಬಳ್ಳಾಲ್, ದ.ಕ. ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೂರ್ವವಲಯ ಬಸ್ ಮಾಲಕರ ಒಕ್ಕೂಟದ ಉಪಾಧ್ಯಕ್ಷ ಜಯಂತ್, ಪ್ರಧಾನ ಕಾಯದರ್ಶಿ ಅನಿಷ್ ಶೆಟ್ಟಿ, ಕೋಶಾಧಿಕಾರಿ ಅಬ್ದುಲ್ ಮಜೀದ್, ಕಾರ್ಯದರ್ಶಿ ಅವೀನ್, ದ.ಕ ಸಿಟಿ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ಅಬ್ದುಲ್ ಅಝೀಝ್ ಪರ್ತಿಪ್ಪಾಡಿ ಉಪಸ್ಥಿತರಿದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.







