ಮತಾಂತರ ತಡೆಗೆ ಪ್ರತಿ ಜಿಲ್ಲೆಯಲ್ಲೂ 10 ಜನರ ಕಾರ್ಯಪಡೆ: ಶ್ರೀರಾಮ ಸೇನೆ

ಸಿದ್ಧಲಿಂಗ ಸ್ವಾಮೀಜಿ-ಶ್ರೀರಾಮ ಸೇನೆ ಅಧ್ಯಕ್ಷ
ಕಲಬುರಗಿ, ಡಿ.22: ಬಲವಂತ ಹಾಗೂ ಆಮಿಷದ ಮೂಲಕ ಮತಾಂತರ ಮಾಡುವವರನ್ನು ತಡೆಯಲು ಶ್ರೀರಾಮ ಸೇನೆ ಸಂಘಟನೆಯು ಪ್ರತಿ ಜಿಲ್ಲಾ ಕೇಂದ್ರದಲ್ಲೂ 10 ಜನರ ಕಾರ್ಯಪಡೆ ರಚಿಸಲಿದ್ದು, ಡಿ. 25ರಿಂದ ಈ ತಂಡ ಕ್ರಿಯಾಶೀಲವಾಗಲಿದೆ ಎಂದು ಶ್ರೀರಾಮ ಸೇನೆ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷರಾದ ಆಂದೋಲಾ ಮಠದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ರಾಜ್ಯ ಸರಕಾರ ತಂದಿರುವ ಮತಾಂತರ ನಿಷೇಧ ಕಾಯ್ದೆ ಅತ್ಯಂತ ಸ್ವಾಗತಾರ್ಹ. ಇದು ಜಾರಿಗೆ ಬಂದ ಮೇಲೂ ತೆರೆಮರೆಯಲ್ಲಿ ಮತಾಂತರ ಮಾಡುವ, ಆಮಿಷ ಒಡ್ಡುವ ಕೆಲಸಗಳು ಕದ್ದುಮುಚ್ಚಿ ನಡೆದೇ ನಡೆಯುತ್ತವೆ. ಅವುಗಳನ್ನು ಪತ್ತೆ ಮಾಡಿ, ತಡೆಯುವ ಉದ್ದೇಶದಿಂದ ರಚಿಸಿರುವ ಕಾರ್ಯಪಡೆ ಪೊಲೀಸರ ಸಹಕಾರದೊಂದಿಗೆ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.
ಈಗಾಗಲೇ ಕ್ರೈಸ್ತ ಧರ್ಮಕ್ಕೆ ಹೋದವರನ್ನು ಮನವೊಲಿಸಿ, ಮರಳಿ ಹಿಂದೂ ಧರ್ಮಕ್ಕೆ ಕರೆತರಲು ಈ ತಂಡ ಮುಂದಾಗಲಿದೆ. ಮರಳುವವರು ಯಾವ ಮತ, ಯಾವ ಜಾತಿಗೆ ಬರಲು ಇಷ್ಟಪಡುತ್ತಾರೋ ಅದೇ ಪ್ರಕಾರ ಸ್ವಾಗತಿಸಲಾಗುವುದು ಎಂದರು.
ದೇಶದಲ್ಲಿ ಪ್ರತಿ ವರ್ಷ 8 ಲಕ್ಷಕ್ಕೂ ಹೆಚ್ಚು ಜನರನ್ನು ಕ್ರೈಸ್ತ ಧರ್ಮಕ್ಕೆ ಒತ್ತಾಯಪೂರ್ವಕವಾಗಿ ಮತಾಂತರ ಮಾಡಲಾಗುತ್ತಿದೆ. ಸ್ವಯಂಪ್ರೇರಣೆಯಿಂದ ಯಾರು ಬೇಕಾದರೂ ಯಾವ ಧರ್ಮವನ್ನಾದರೂ ಸ್ವೀಕರಿಸಲಿ. ಆ ಹಕ್ಕನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ, ಕಾಂಗ್ರೆಸ್ನ ಶ್ರೀರಕ್ಷೆ ಇದೆ ಎಂಬ ಕಾರಣಕ್ಕೆ ಉದ್ದಟತನದಿಂದ ನಡೆದುಕೊಳ್ಳುವ ಕ್ರೈಸ್ತ ಮಿಷನರಿಗಳಿಗೆ ಲಗಾಮು ಹಾಕಬೇಕಾಗಿದೆ. ಈ ಬಗ್ಗೆ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಅವರ ನೇತೃತ್ವದಲ್ಲಿ 70 ಮಠಾಧೀಶರು ಸೇರಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದೆವು. ಮುಖ್ಯಮಂತ್ರಿ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ಹಿಂದೂ ಧರ್ಮೀಯರಲ್ಲಿ ನೆಮ್ಮದಿ ತಂದಿದೆ ಎಂದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಗೊಬ್ಬೂರ, ಕಾರ್ಯದರ್ಶಿ ಈಶ್ವರ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಹೇಶ ಕೆಂಭಾವಿ, ಮುಖಂಡರಾದ ಸಂತೋಷ ಹಿರೇಮಠ, ಶರಣಪ್ಪ ರೆಡ್ಡಿ ಇದ್ದರು.
ಸೋನಿಯಾ ಮೆಚ್ಚಿಸಲು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸುವರ್ಣ ವಿಧಾನಸೌಧದಲ್ಲೇ ಈ ಕಾಯ್ದೆಯ ಪ್ರತಿಗಳನ್ನು ಹರಿದುಹಾಕಿ ಸದನಕ್ಕೆ ಅಗೌರವ ತೋರಿದ್ದಾರೆ. ಅವರ ಈ ನಡೆ ದೊಡ್ಡ ಸಂಖ್ಯೆಯ ಹಿಂದೂಗಳಿಗೆ ನೋವು ತಂದಿದೆ. ಮತಾಂತರ ನಡೆಯಬೇಕಾದರೆ ಕಾನೂನು ಚೌಕಟ್ಟಿನಲ್ಲೇ ಆಗಬೇಕು ಎಂಬ ನಿಯಮವನ್ನೂ ಅವರು ವಿರೋಧಿಸಿದ್ದಾರೆ. ತಮ್ಮ ಪಕ್ಷದ ನಾಯಕಿಯನ್ನು ಮೆಚ್ಚಿಸುವ ಸಲುವಾಗಿ ಈ ರೀತಿ ರಾಜಕಾರಣ ಮಾಡಬಾರದು.
-ಸಿದ್ಧಲಿಂಗ ಸ್ವಾಮೀಜಿ, ಶ್ರೀರಾಮ ಸೇನೆ ಅಧ್ಯಕ್ಷ







