ಫಲಾನುವಿಭಗಳಿಗೆ ಸವಲತ್ತು ಒದಗಿಸಲು ಬ್ಯಾಂಕುಗಳು ಮುಂದಾಗಬೇಕು: ಜಿಪಂ ಸಿಇಒ ಕುಮಾರ್
ದ.ಕ.ಜಿಲ್ಲಾ ಲೀಡ್ ಬ್ಯಾಂಕ್ ಸಭೆ

ಮಂಗಳೂರು, ಡಿ. 22: ಜನಸಾಮಾನ್ಯರ ಶ್ರೇಯೋಭಿವೃದ್ದಿಗಾಗಿ ಸರಕಾರ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳ ಸಾಲ ಸೌಲಭ್ಯದ ಬಗ್ಗೆ ಸೂಕ್ತ ಮಾಹಿತಿ ಹಾಗೂ ಫಲಾನುಭವಿಗಳಿಗೆ ನಿಗದಿತ ಅವಧಿಯೊಳಗೆ ಬ್ಯಾಂಕುಗಳಿಂದ ಸವಲತ್ತು ಒದಗಿಸಿಕೊಡಲು ಜಿಲ್ಲೆಯ ಬ್ಯಾಂಕುಗಳು ಮುಂದಾಗಬೇಕು ಎಂದು ದ.ಕ.ಜಿಪಂ ಸಿಇಒ ಡಾ. ಕುಮಾರ್ ಹೇಳಿದರು.
ದ.ಕ. ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಲೀಡ್‌ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಸಮಾಲೋಚನಾ ಸಮಿತಿ (ಡಿಸಿಸಿ) ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ (ಡಿಎಲ್‌ಆರ್‌ಸಿ) ಸಮಿತಿ ಸದಸ್ಯರ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕುಗಳ ಮೂಲಕ ಸರಕಾರದಿಂದ ನೀಡಲಾಗುವ ಸಾಲ ಸೌಲಭ್ಯಗಳ ಲಾಭ ಪಡೆಯಲು ಶ್ರಮಿಸಬೇಕು, ಜನಧನ್ ಖಾತೆ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು, ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿ ಸುವ ಮೂಲಕ ದ.ಕ.ಜಿಲ್ಲೆಯನ್ನು ಶೇ.100ರಷ್ಟು ‘ಭಿಮಾಜಿಲ್ಲೆ’ ಎಂದು ಘೋಷಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಕಾರ್ಯೋನ್ಮುಖವಾಗಬೇಕುಎಂದು ಡಾ.ಕುಮಾರ್ ಕರೆ ನೀಡಿದರು.
ಕೇಂದ್ರ ಸರಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆಬಿವೈ (ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ), ಪಿಎಂಎಸ್‌ಬಿವೈ (ಪ್ರಧಾನ ಮಂತ್ರಿ ಸುರಕ್ಷ ಬಿಮಾ ಯೋಜನಾ) ಹಾಗೂ ಎಪಿವೈ(ಅಟಲ್ ಪಿಂಚಣಿ ಯೋಜನಾ)ಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಾ.ಕುಮಾರ್ ತಿಳಿಸಿದರು.
ಕೃಷಿ, ಶಿಕ್ಷಣ ಹಾಗೂ ಗೃಹ ನಿರ್ಮಾಣ ವಿಭಾಗಗಳಲ್ಲಿ ಜಿಲ್ಲೆಯ ಬ್ಯಾಂಕ್‌ಗಳು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಕೃಷಿಯಲ್ಲಿ ಶೇ.35.27, ಶಿಕ್ಷಣದಲ್ಲಿ ಶೇ.35.40, ಗೃಹಸಾಲದಲ್ಲಿ ಶೇ.22.34 ಮಾತ್ರ ನಿರ್ವಹಣೆಯಾಗಿದೆ. ಹಾಗಾಗಿ ಈ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡದಿದ್ದರೆ, ಬ್ಯಾಂಕ್‌ಗಳಿಗೆ ಪ್ರಗತಿ ದಾಖಲಿಸಲು ಸಾಧ್ಯವಾಗುವುದಿಲ್ಲ ಎಂದ ಕುಮಾರ್ ಕನಿಷ್ಠ ಗುರಿಯನ್ನೂ ಸಾಧಿಸದ ಬ್ಯಾಂಕ್‌ಗಳ ಅಧಿಕಾರಿಗಳು, ಗ್ರಾಮೀಣ ವಿಭಾಗದಲ್ಲಿ ಸುತ್ತಾಡಿ ಬ್ಯಾಂಕ್‌ನಲ್ಲಿರುವ ಯೋಜನೆ, ಸಾಲ ಸೌಲಭ್ಯದ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಆರ್‌ಬಿಐನ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಭಂದಕ ಟಿ.ಆರ್. ಆಚಾರ್ಯ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಂಗೀತ ಕಾರ್ತ್, ಕೆನರಾ ಬ್ಯಾಂಕ್ ಉಪ ಮಹಾಪ್ರಬಂಧಕ ಶ್ರೀಕಾಂತ್ ಬಿ.ಕೆ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕಿ ಸುಶ್ಮಿತಾ ಹಾಗೂ ಎಲ್ಲಾ ಬ್ಯಾಂಕ್‌ಗಳ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿ ಬಾರಿಯೂ ಲೀಡ್ ಬ್ಯಾಂಕ್ ಸಭೆಗೆ ಗೈರಾಗುತ್ತಿರುವ ಐಸಿಐಸಿ ಬ್ಯಾಂಕ್ ಅಧಿಕಾರಿಗೆ ನೋಟಿಸ್ ನೀಡುವಂತೆ ತಿಳಿಸಿದ ಜಿಪಂ ಸಿಇಒ ಡಾ.ಕುಮಾರ್, ಬ್ಯಾಂಕಿನಲ್ಲಿರುವ ಸರಕಾರದ ಖಾತೆಯನ್ನು ಹಿಂಪಡೆಯುವಂತೆ ಎಲ್ಲ ಇಲಾಖೆಗಳಿಗೆ ಸೂಚಿಸುವುದಾಗಿ ಎಚ್ಚರಿಕೆ ನೀಡಿದರು.
ಜುಲೈ-ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ವ್ಯವಹಾರ 88,100.12 ಕೋ.ರೂ.ಗಳಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ.9.32ರಷ್ಟು ಬೆಳವಣಿಗೆ ಸಾಧಿಸಿದೆ. ಪ್ರಸಕ್ತ ಜಿಲ್ಲೆಯಲ್ಲಿ ಬ್ಯಾಂಕ್‌ಗಳ ಶಾಖೆ 619 ಆಗಿದೆ ಎಂದು ಲೀಡ್ ಬ್ಯಾಂಕ್‌ಮ್ಯಾನೇಜರ್ ಪ್ರವೀಣ್ ಸಭೆಗೆ ಮಾಹಿತಿ ನೀಡಿದರು.
ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ಠೇವಣಿ 54,600.93 ಕೋ.ರೂ.ಗಳಾಗಿದ್ದು, ವಾರ್ಷಿಕ ಶೇ.7.07ರಷ್ಟು ಬೆಳವಣಿಗೆ ಹೊಂದಿದೆ. ಒಟ್ಟು ಸಾಲ, 33,499.10 ಕೋ.ರೂ.ಗಳಾಗಿದ್ದು, ಶೇ.13.18ರ ಬೆಳವಣಿಗೆ ಸಾಧಿಸಿದೆ, ಸಾಲದ ಅನುಪಾತ ಶೇ.61.35 ಆಗಿದ್ದು, ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದಾಗ ಶೇ.3.31ರಷ್ಟು ಅಭಿವೃದ್ಧಿ ಸಾಧಿಸಿದೆ ಎಂದರು.
2021-22ನೇ ಸಾಲಿನ ಮೊದಲ ಅರ್ಧ ವರ್ಷದಲ್ಲಿ ಜಿಲ್ಲೆಯಲ್ಲಿ 11,352.75 ಕೋ.ರೂ.ಗಳಷ್ಟು ಸಾಲ ವಿತರಿಸಲಾಗಿದ್ದು, ವಾರ್ಷಿಕ ಗುರಿ 19,335 ಕೋ.ರೂ.ಗಳಾಗಿದ್ದು, ಶೇ.58.72 ನಿರ್ವಹಣೆ ಸಾಧಿಸಿದಂತಾಗಿದೆ ಎಂದರು.
ಆದ್ಯತಾ ಕ್ಷೇತ್ರದಲ್ಲಿ 5,332.96ಕೋ.ರೂ.ಗಳಷ್ಟು ಸಾಲ ವಿತರಿಸಲಾಗಿದೆ.ವಾರ್ಷಿಕ ಗುರಿ 12,534.74 ಕೋ.ರೂ.ಗಳಾಗಿದ್ದು, ಶೇ.42.55ರಷ್ಟು ನಿರ್ವಹಣೆ ತೋರಿಸಿದೆ. ಮುದ್ರಾ ಯೋಜನೆಯಲ್ಲಿ 21,520 ಖಾತೆಗಳಲ್ಲಿ 209.40 ಕೋ.ರೂ.ಸಾಲವನ್ನು ವಿತರಿಸಲಾಗಿದೆ ಎಂದು ಪ್ರವೀಣ್ ತಿಳಿಸಿದರು.
ಅಂಟಲ್ ಪಿಂಚಣಿ ಯೋಜನೆಯಲ್ಲಿ 1,04,838 ಖಾತೆ ತೆರೆಯಲಾಗಿದೆ. ಪಿ.ಎಂ. ಸ್ವನಿಧಿಯಡಿ ಜಿಲ್ಲೆಯಲ್ಲಿ ಡಿ.13ರ ವರೆಗೆ 5,092 ಅರ್ಜಿಗಳು ಮಂಜೂರಾತಿಗೊಂಡಿದೆ ಎಂದು ಹೇಳಿದರು.







