ಮಂಗಳೂರು: ಆನ್‌ಲೈನ್ ಮೂಲಕ ವಂಚನೆ; ದೂರು

ಮಂಗಳೂರು, ಡಿ. 22: ನಗರದ ವ್ಯಕ್ತಿಯೋರ್ವರಿಗೆ ‘ಪ್ಲಿಪ್‌ಕಾರ್ಟ್ ರಿಕ್ರೂಟ್‌ಮೆಂಟ್ ಪಾರ್ಟ್ ಟೈಂ ಜಾಬ್’ ಎಂಬ ಹೆಸರಿನ ವೆಬ್‌ಸೈಟ್ ಲಿಂಕ್ ಕಳುಹಿಸಿದ ಅಪರಿಚಿತನೊಬ್ಬ ಆನ್‌ಲೈನ್ ಮೂಲಕ 1.34 ಲ.ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ವ್ಯಕಿಗೆ 8147067812 ಸಂಖ್ಯೆಯಿಂದ ಡಿ.19ರಂದು ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್ ಬಂದಿತ್ತು. ಅದರಲ್ಲಿ ಪ್ಲಿಫ್‌ಕಾರ್ಟ್ ಪಾರ್ಟ್ ಟೈಂ ಜಾಬ್‌ಗಾಗಿ ಲಿಂಕ್‌ನ್ನು ತೆರೆಯುವಂತೆ ತಿಳಿಸಲಾಗಿತ್ತು. ದೂರುದಾರ ವ್ಯಕ್ತಿಯು ಲಿಂಕ್ ತೆರೆದು ಪ್ಲಿಫ್‌ಕಾರ್ಟ್ ಖಾತೆಯಲ್ಲಿ ನೋಂದಣಿ ಮಾಡಿಕೊಂಡರು. ಆವಾಗ ಅವರ ಪ್ಲಿಪ್‌ಕಾರ್ಟ್ ಖಾತೆಗೆ 100 ರೂ. ಜಮೆಯಾಯಿತು. ಅನಂತರ ವೆಬ್‌ಸೈಟ್‌ನವರು ‘200 ರೂ.ಗಳನ್ನು ಪೋನ್ ಪೇ ಮೂಲಕ ರೀಚಾರ್ಜ್ ಮಾಡಿದರೆ ಹಣ ಹೇಗೆ ಮಾಡುವುದು ಎಂಬುದಾಗಿ ಹೇಳಿಕೊಡಲಾಗುವುದು’ ಎಂದು ಸಂದೇಶ ಕಳುಹಿಸಿದರು. ಅದನ್ನು ನಂಬಿದ ವ್ಯಕ್ತಿಯು 200 ರೂ.ಗಳನ್ನು ಜಮೆ ಮಾಡಿದರು. ಅಲ್ಲದೆ ಪ್ಲಿಪ್‌ಕಾರ್ಟ್‌ನವರು ಕೊಟ್ಟ ಟಾಸ್ಕ್‌ನ್ನು ಪೂರ್ಣಗೊಳಿಸಿದರು. ಆವಾಗ ವ್ಯಕ್ತಿಯ ಪ್ಲಿಪ್‌ಕಾರ್ಟ್ ಖಾತೆಗೆ 350 ರೂ. ಜಮೆ ಆಯಿತು. ಮತ್ತೆ ಹಣ ಪಡೆಯಬೇಕಾದರೆ ಮತ್ತೆ 500 ರೂ. ರೀಚಾರ್ಜ್ ಮಾಡಲು ವೆಬ್‌ಸೈಟ್‌ನವರು ಸೂಚಿಸಿದರು. ಅದರಂತೆ ವ್ಯಕ್ತಿಯು ಮತ್ತೆ 500 ರೂ., ಬಳಿಕ 808 ರೂ., 2,012 ರೂ. ಹೀಗೆ ಒಟ್ಟು 1,34,554 ರೂ.ಗಳನ್ನು ವರ್ಗಾವಣೆ ಮಾಡಿದರು. ಎಲ್ಲ ಟಾಸ್ಕ್ ಪೂರ್ಣಗೊಳಿಸಿದರು. ಆಗ ದೂರುದಾರರ ಪ್ಲಿಪ್‌ಕಾರ್ಟ್ ಖಾತೆಗೆ 4,13,992 ಹಣ ಜಮೆಯಾಗಿದೆ ಎಂದು ತೋರಿಸಲಾಯಿತು. ಅಲ್ಲದೆ ಆ ಹಣ ವಿದ್ ಡ್ರಾ ಮಾಡಬೇಕಾದರೆ 82,798 ರೂ. ತೆರಿಗೆ ಕಟ್ಟಬೇಕು ಎಂದು ತಿಳಿಸಲಾಯಿತು. ಆ ಸಂದರ್ಭ ದೂರುದಾರರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





