ಮ್ಯಾನ್ಮಾರ್: ಹರಳಿನ ಗಣಿಯಲ್ಲಿ ಭೂಕುಸಿತ; ಒಬ್ಬ ಮೃತ್ಯು, 70 ಮಂದಿ ನಾಪತ್ತೆ

ಸಾಂದರ್ಭಿಕ ಚಿತ್ರ:PTI
ಯಾಂಗಾನ್, ಡಿ.22: ಮ್ಯಾನ್ಮಾರ್ನ ಉತ್ತರದಲ್ಲಿರುವ ಹರಳಿನ (ದಟ್ಟ ಹಸಿರು ಬಣ್ಣದ ಬೆಲೆಬಾಳುವ ಶಿಲೆ) ಗಣಿಯೊಂದರಲ್ಲಿ ಸಂಭವಿಸಿದ ಭೂ ಕುಸಿತದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಕನಿಷ್ಟ 70 ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕಚಿನ್ ರಾಜ್ಯದ ಹಪಕಂತ್ ಗಣಿಯಲ್ಲಿ ದುರಂತ ಸಂಭವಿಸಿದೆ. ಭೂಕುಸಿತ ಸಂಭವಿಸಿದಾಗ ಗಣಿಯೊಳಗೆ ಸುಮಾರು 100 ಮಂದಿ ಇದ್ದರು. ಒಬ್ಬ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು 25 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಕ್ಷಣಾ ತಂಡದ ಸದಸ್ಯರು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ರಕ್ಷಣಾ ತಂಡದ ಸುಮಾರು 200 ಮಂದಿ ಮಣ್ಣಿನಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲವರು ಸಮೀಪದ ಕೆರೆಯಲ್ಲಿ ಮುಳುಗಿರುವ ಸಾಧ್ಯತೆಯಿದ್ದು ಕೆರೆಯಲ್ಲಿ ದೋಣಿ ಬಳಸಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story





