ನೀರಾವರಿ ಯೋಜನೆಗಳಿಗೆ ಪಕ್ಷಭೇದ ಮರೆತು ಶ್ರಮಿಸೋಣ: ಬಿಎಸ್.ಯಡಿಯೂರಪ್ಪ

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.22: ರಾಜ್ಯದಲ್ಲಿ ನನ್ನ ನೇತೃತ್ವದಲ್ಲಿ ಪ್ರಥಮ ಬಿಜೆಪಿ ಸರಕಾರ ಅವಧಿಯಲ್ಲಿ ಕೃಷ್ಣಾ ನ್ಯಾಯಾಧೀಕರಣದ ಐತೀರ್ಪು ಬಂತು. ತಕ್ಷಣ ನಾವು ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ಕಾಮಗಾರಿಗಳಿಗೆ ವಿವರವಾದ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟೆವು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ವಿಧಾನಸಭೆಯಲ್ಲಿ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಹಾಗೂ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುಂಠಿತವಾಗಿರುವ ಕುರಿತು ನಿಯಮ 69ರ ಮೇರೆಗೆ ನಡೆದ ಸಾರ್ವಜನಿಕ ಮಹತ್ವದ ವಿಷಯದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ಮಾಡಿ ನೀಡಿದ್ದ ವಾಗ್ದಾನ ಈಡೇರಿಸಿಲ್ಲ. ಕಾಂಗ್ರೆಸ್ ಸರಕಾರ ಆರೂವರೆ ವರ್ಷದ ತನ್ನ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ಪುನರ್ ವಸತಿ ಕೇಂದ್ರ ಮಾಡಿಲ್ಲ ಎಂದು ಯಡಿಯೂರಪ್ಪ ದೂರಿದರು.
ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ 2008 ರಿಂದ 2013ರ ವರೆಗಿನ ಅವಧಿ ರಾಜ್ಯದ ಪಾಲಿಗೆ ಸುವರ್ಣ ಯುಗ. ಕೃಷ್ಣಾ ನ್ಯಾಯಾಧೀಕರಣದ ಐತೀರ್ಪು, ಕಾವೇರಿ ಐತೀರ್ಪು ಕುರಿತು ಗೆಜೆಟ್ ಪ್ರಕಟ, ಮಹಾದಾಯಿ ವಿವಾದದ ಕುರಿತು ನ್ಯಾಯಾಧೀಕರಣ ರಚನೆಯಾಯಿತು ಎಂದು ಅವರು ಹೇಳಿದರು.
2019ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೊಪ್ಪಳ ಏತನೀರಾವರಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಬದ್ಧರಿದ್ದೇವೆ. ಆಲಮಟ್ಟಿ ಜಲಾಶಯವನ್ನು ಎತ್ತರಿಸಿ ಕರ್ನಾಟಕದ ಪಾಲಿನ 130 ಟಿಎಂಸಿ ನೀರು ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ, ನವಿಲೆ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದರು.
ಪಕ್ಷಬೇಧ ಮರೆತು ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಟ್ಟು ಪ್ರಾಮಾಣಿಕ ಕೆಲಸ ಮಾಡಬೇಕು. ಯಾವುದೆ ಸರಕಾರವಿರಲಿ, ಒಂದಿಲ್ಲ ಒಂದು ಕಾರಣಕ್ಕೆ ಯೋಜನೆಗಳು ಕುಂಟುತ್ತಾ ಸಾಗುತ್ತಿವೆ. ಅದಕ್ಕಾಗಿ ನಿಗದಿತ ಸಮಯದಲ್ಲಿ ಯೋಜನೆ ಪೂರ್ಣಗೊಳಿಸಬೇಕು. ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಗಳು ರೂಪಿಸಿದರೆ ಮಾತ್ರ ಇಲ್ಲಿ ಅಧಿವೇಶನ ನಡೆಸುವುದು ಸಾರ್ಥಕವಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.







