ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಕಿರಿಯ ವಿಜ್ಞಾನಿಯಾಗಿ ಅಸ್ಸಾಂನ ನಾಝ್ನೀನ್ ಯಾಸ್ಮೀನ್ ನೇಮಕ
"ನನಗೆ ಕಲ್ಪನಾ ಚಾವ್ಲಾ ಪ್ರೇರಣೆ"
Photo: Eastmojo.com
ಹೊಸದಿಲ್ಲಿ: ತೇಜ್ಪುರ್ ವಿಶ್ವವಿದ್ಯಾನಿಲಯದಿಂದ ಎಂಟೆಕ್ ಪದವಿ ಪಡೆದಿರುವ ಅಸ್ಸಾಂನ ನಾಗಾವ್ ಜಿಲ್ಲೆಯ ಜೂರಿಯಾ ಪಟ್ಟಣ ನಿವಾಸಿ ನಾಝ್ನೀನ್ ಯಾಸ್ಮೀನ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಜೂನಿಯರ್ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.
ನಾಝ್ನೀನ್ ಗುವಾಹಟಿ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಎನ್ಐಟಿಎಸ್ ಮಿರ್ಜಾ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ನಲ್ಲಿ ತನ್ನ ಬಿ.ಟೆಕ್ ಅನ್ನು ಪೂರ್ಣಗೊಳಿಸಿದ್ದು, 2016 ರಲ್ಲಿ ತೇಜ್ಪುರ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಿಂದ ಎಂ.ಟೆಕ್ ತೇರ್ಗಡೆಗೊಂಡಿದ್ದೇಣೆ ಎಂದು ಯಾಸ್ಮಿನ್ Eastmojo.comಗೆ ತಿಳಿಸಿದ್ದಾರೆ.
“ನಾನು ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಜೀವನದಿಂದ ಪ್ರೇರೇಪಣೆಗೊಂಡಿದ್ದೇನೆ. ನನ್ನ ಬಾಲ್ಯದಿಂದಲೂ ರಾಕೆಟ್ ಹೇಗೆ ಉಡಾವಣೆಯಾಗುತ್ತದೆ ಎಂಬುದನ್ನು ನೋಡಲು ನಾನು ಬಯಸಿದ್ದೆ ಮತ್ತು ಅದುವೇ ನನ್ನನ್ನು ಮುಂದುವರಿಸಿದೆ, ”ಎಂದು ಯಾಸ್ಮಿನ್ ಹೇಳಿದರು.
"ಎಂ.ಟೆಕ್ ಮುಗಿದ ನಂತರ, ನಾನು ನನ್ನ ವಿಜ್ಞಾನಿ ಸ್ನೇಹಿತನ ಸಹಾಯವನ್ನು ಪಡೆದುಕೊಂಡೆ ಮತ್ತು ರಾಕೆಟ್ ವಿಜ್ಞಾನಿಯಾಗುವುದು ಹೇಗೆ ಎಂದು ಗೂಗಲ್ನಲ್ಲಿ ಹುಡುಕಿದೆ" ಎಂದು ಅವರು ಹೇಳುತ್ತಾರೆ.
ಯಾಸ್ಮಿನ್ ಅವರು 2019 ರಲ್ಲಿ ಇಸ್ರೋಗೆ ಆಯ್ಕೆಗಾಗಿ ಲಿಖಿತ ಪರೀಕ್ಷೆಗೆ ಹಾಜರಾಗಿದ್ದರು ಮತ್ತು ಆಗಸ್ಟ್ 11, 2021 ರಂದು ಶಿಲ್ಲಾಂಗ್ನಲ್ಲಿರುವ ಈಶಾನ್ಯ ಬಾಹ್ಯಾಕಾಶ ಕೇಂದ್ರದಲ್ಲಿ ಸಂದರ್ಶನಕ್ಕೆ ಕರೆ ಬಂದಿತ್ತು.
"ನಾನು ಇಸ್ರೋ ಸೇರಲು ಬಯಸಿದ್ದೇಕೆ? ಎಂದು ಸಮಿತಿಯು ನನ್ನನ್ನು ಕೇಳಿದಾಗ, ನಾನು ರಾಕೆಟ್ ಉಡ್ಡಯಿಸಲು ಬಯಸಿದ್ದೆ" ಎಂದು ಹೇಳಿದ್ದಾಗಿ ನಾಝ್ನೀನ್ ಯಾಸ್ಮಿನ್ ನೆನಪಿಸಿಕೊಂಡರು.
ಶಾಲಾ ಶಿಕ್ಷಕ ಅಬುಲ್ ಕಲಾಂ ಆಝಾದ್ ಮತ್ತು ಮಂಝಿಲಾ ಬೇಗಂ ಅವರ ಪುತ್ರಿ ಯಾಸ್ಮಿನ್ ನಾಗಾವ್ನ ಜೂರಿಯಾದ ಕಡ್ಮನ್ ಟೌನ್ ಹೈಸ್ಕೂಲ್ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಭಾರತ ಸರ್ಕಾರದ ಜೂನಿಯರ್ ರಿಸರ್ಚ್ ಫೆಲೋಶಿಪ್ ಕೂಡ ಪಡೆದಿರುವ ಯಾಸ್ಮಿನ್, ಡಿಸೆಂಬರ್ 30 ರ ಮೊದಲು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋ ಪ್ರಧಾನ ಕಛೇರಿಯಲ್ಲಿ ವಿಜ್ಞಾನಿಯಾಗಿ ತನ್ನ ಹೊಸ ಕೆಲಸಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.