ಮೈಸೂರು: ಮತಾಂತರ ನಿಷೇಧ ಕಾಯಿದೆ ದುರ್ಬಳಕೆಯಾಗಬಹುದೆಂಬ ಆತಂಕವಿದೆ; ಬಿಷಪ್ ಡಾ.ಕೆ.ಎ.ವಿಲಿಯಂ

ಮೈಸೂರು,ಡಿ.22: ಮತಾಂತರ ನಿಷೇಧ ಕಾಯಿದೆ ಜಾರಿ ಬಗ್ಗೆ ಭಯ ಇಲ್ಲ. ಆದರೆ ಆ ಕಾಯಿದೆ ದುರ್ಬಳಕೆಯಾಗಬಹುದೆಂಬ ಆತಂಕ ಇರುವುದಾಗಿ ಬಿಷಪ್ ಡಾ.ಕೆ.ಎ.ವಿಲಿಯಂ ತಿಳಿಸಿದರು.
ಬಲವಂತ, ಒತ್ತಾಯದಿಂದ ಮತಾಂತರ ಮಾಡುವ ಪ್ರಶ್ನೆಯೇ ಇಲ್ಲ. 150 ಶಾಲೆ, ಕಾಲೇಜುಗಳಲ್ಲಿ ಲಕ್ಷಾಂತರ ಮಕ್ಕಳು ಓದುತ್ತಿದ್ದಾರೆ. ರಾಷ್ಟ್ರ, ಸಮಾಜಕ್ಕೆ ಸೇವೆ ಮಾಡುತ್ತಿದ್ದೇವೆ. ಮತಾಂತರ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಏನೂ ಇಲ್ಲದೇ ಅಪವಾದ ಮಾಡುತ್ತಿದ್ದಾರೆ. ಜತೆಗೆ ಮತಾಂತರ ನಿಷೇಧ ಕಾಯಿದೆ ಅಗತ್ಯವೇ ಇಲ್ಲ. ಕಾಯಿದೆ ಜಾರಿಯಾದರೂ ಸಾಸಿವೆ ಕಾಳಿನಷ್ಟು ಭಯ ಇಲ್ಲ. ಈ ಕಾಯಿದೆ ದುರ್ಬಳಕೆ ಮಾಡಿಕೊಂಡು ಸುಳ್ಳು ದೂರು ಕೊಟ್ಟು ತೊಂದರೆ ಮಾಡಬಹುದು.
ರಾಜ್ಯದಲ್ಲಿ ಧರ್ಮಾಧ್ಯಕ್ಷ ಒಕ್ಕೂಟ ಇದೆ. ಕಾಯಿದೆ ಜಾರಿಯಾದ ನಂತರ ಮುಂದೇನು? ಮಾಡಬೇಕು ಎಂದು ನಿರ್ಧಾರ ಮಾಡುತ್ತೇವೆ. ಅನಿವಾರ್ಯ ಮತ್ತು ಅಗತ್ಯವಿರುವುದನ್ನು ಮಾಡಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶೀಘ್ರ ನಿರ್ಧರಿಸುವುದಾಗಿ ತಿಳಿಸಿದರು.
ಧರ್ಮಾಧ್ಯಕ್ಷರ ಒಕ್ಕೂಟ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದಾಗ ಮತಾಂತರ ನಿಷೇಧ ಕಾಯಿದೆ ಸಂಬಂಧ ಚರ್ಚೆಯೇ ಮಾಡಲಿಲ್ಲ. ನೂತನ ಶಿಕ್ಷಣ ನೀತಿ, ಸ್ಮಶಾನಕ್ಕೆ ಜಾಗ ನೀಡುವಂತೆ ಮನವಿ ಮಾಡಿದೆವು. ಆದರೆ ಮತಾಂತರ ನಿಷೇಧ ಕಾಯ್ದೆ ಬಗ್ಗೆ ವರದಿಯಾಯಿತು ಎಂದು ಸ್ಪಷ್ಟನೆ ನೀಡಿದರು.







