ಹಾಸಿಗೆಯಲ್ಲಿ ಮಲಗಿ ನ್ಯಾಯಾಲಯದ ಆನ್ಲೈನ್ ವಿಚಾರಣೆಗೆ ಹಾಜರಿ: ಪಂಜಾಬ್ ಮಾಜಿ ಪೊಲೀಸ್ ಮುಖ್ಯಸ್ಥನಿಗೆ ಕೋರ್ಟ್ ಎಚ್ಚರಿಕೆ
ಚಂಡೀಗಢ, ಡಿ. 23: 1994ರ ತ್ರಿವಳಿ ಕೊಲೆ ಪ್ರಕರಣದಲ್ಲಿಆರೋಪಿಯಾಗಿರುವ ಪಂಜಾಬ್ ಪೊಲೀಸ್ ನ ಮಾಜಿ ಮುಖ್ಯಸ್ಥ ಸುಮೇದ್ ಸಿಂಗ್ ಸೈನಿ ಸೋಮವಾರ ನಡೆದ ವೀಡಿಯೊಕಾನ್ಫರೆನ್ಸ್ ವಿಚಾರಣೆಗೆ ಹಾಸಿಗೆಯಲ್ಲಿ ಮಲಗಿ ಹಾಜರಾದಾಗ ಸಿಡಿಮಿಡಿಗೊಂಡ ನ್ಯಾಯಾಲಯವು, ಅವರಿಗೆಎಚ್ಚರಿಕೆ ನೀಡಿತು. "ಇನ್ನು ಮುಂದೆ ನಿಮ್ಮ ವರ್ತನೆಯ ಬಗ್ಗೆ ಜಾಗರೂಕತೆಯಿಂದಿರಿ ಹಾಗೂ ನ್ಯಾಯಾಲಯದ ಘನತೆಯನ್ನುಕಾಪಾಡಿ’’ ಎಂದು ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಸಂಜೀವ್ಅಗರ್ವಾಲ್ ಸುಮೇದ್ ಸೈನಿಗೆ ಸೂಚಿಸಿದರು.
"ನನಗೆ ಸೌಖ್ಯವಿಲ್ಲ, ಜ್ವರವಿದೆ’’ ಎಂಬುದಾಗಿ ಮಾಜಿ ಪೊಲೀಸ್ ಮುಖ್ಯಸ್ಥರು ಹೇಳಿದರೂ, "ಈ ಸಂಬಂಧ ನೀವು ನ್ಯಾಯಾಲಯಕ್ಕೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿಲ್ಲ’’ ಎಂಬುದಾಗಿ ನ್ಯಾಯಾಧೀಶರು ಹೇಳಿದರು.
"ಆರೋಪಿ ನಂಬರ್ ವನ್ ಸುಮೇದ್ ಕುಮಾರ್ ಸೈನಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ, ಅವರು ಹಾಸಿಗೆಯಲ್ಲಿ ಮಲಗಿ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿರುವುದನ್ನು ಗಮನಿಸಲಾಗಿದೆ. ಈ ಬಗ್ಗೆ ಕೇಳಿದಾಗ, ತನಗೆ ಸೌಖ್ಯವಿಲ್ಲ ಹಾಗೂ ಜ್ವರವಿದೆ ಎಂಬುದಾಗಿಅವರು ಹೇಳಿದ್ದಾರೆ. ಆದರೆ ಈ ಸಂಬಂಧ ಯಾವುದೇ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಲಾಗಿಲ್ಲ. ಹಾಗಾಗಿ, ಭವಿಷ್ಯದಲ್ಲಿ ವೀಡಿಯೊಕಾನ್ಫರೆನ್ಸ್ ಮೂಲಕ ನ್ಯಾಯಾಂಗ ಕಲಾಪದಲ್ಲಿ ಭಾಗವಹಿಸುವಾಗ ನಿಮ್ಮ ವರ್ತನೆಯ ಬಗ್ಗೆ ಜಾಗರೂಕರಾಗಿರಿ ಹಾಗೂ ನ್ಯಾಯಾಲಯದ ಘನತೆಯನ್ನು ಕಾಪಾಡಿ ಎಂಬುದಾಗಿ ಒಂದನೇ ಆರೋಪಿಗೆ ಎಚ್ಚರಿಕೆ ನೀಡಲಾಗಿದೆ’’ ಎಂಬುದಾಗಿ ನ್ಯಾಯಾಧೀಶರು ತನ್ನ ಆದೇಶದಲ್ಲಿ ಹೇಳಿದ್ದಾರೆ.
1994ರಲ್ಲಿ ಲುಧಿಯಾನದಲ್ಲಿ ಮೂವರು ವ್ಯಕ್ತಿಗಳನ್ನು ಅಪಹರಿಸಿ ಕೊಂದ ಆರೋಪವನ್ನು ಸುಮೇದ್ ಸೈನಿ ಮತ್ತು ಇತರ ಮೂವರು ಪೊಲೀಸರುಎದುರಿಸುತ್ತಿದ್ದಾರೆ.