ಹಿಂದುತ್ವವನ್ನು ಐಸಿಸ್, ಬೋಕೊ ಹರಾಮ್ ಗೆ ಹೋಲಿಕೆ: ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್‍ಐಆರ್ ದಾಖಲಿಸಲು ಸೂಚನೆ

ಲಕ್ನೋ: ತಮ್ಮ ಕೃತಿ `ಸನ್‍ರೈಸ್ ಓವರ್ ಅಯ್ಯೋಧ್ಯಾ: ನೇಷನ್‍ಹುಡ್ ಇನ್ ಅವರ್ ಟೈಮ್ಸ್'ನಲ್ಲಿ ಹಿಂದುತ್ವವನ್ನು ಉಗ್ರ ಸಂಘಟನೆಗಳಾದ ಐಸಿಸ್ ಹಾಗೂ ಬೊಕೋ ಹರಾಮ್‍ಗೆ ಹೋಲಿಸಿದ್ದಾರೆಂಬ ಆರೋಪ ಹೊತ್ತಿರುವ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಲಕ್ನೋದ ಮ್ಯಾಜಿಸ್ಟ್ರೇಟ್ ಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ಸೂಚನೆ ನೀಡಿದೆ. ಎಫ್‍ಐಆರ್ ಪ್ರತಿಯನ್ನು ನ್ಯಾಯಾಲಯಕ್ಕೆ ಮೂರು ದಿನಗಳೊಳಗೆ ಕಳುಹಿಸಬೇಕೆಂದೂ ಸೂಚಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಂಡಸಂಹಿತೆಯಡಿ ಕೇಸ್ ದಾಖಲಿಸಿ ತನಿಖೆ ನಡೆಸಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಸಲ್ಮಾನ್ ಖುರ್ಷೀದ್ ಅವರ ಕೃತಿಯ ಕೆಲ ಭಾಗಗಳು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡುತ್ತಿವೆ ಎಂದು ದೂರಿ ಶುಭಾಂಗಿ ತ್ಯಾಗಿ ಎಂಬವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿಂದೆ ತ್ಯಾಗಿ ಪೊಲೀಸ್ ದೂರು ನೀಡಿದ್ದರೂ ಪೊಲೀಸರು ಎಫ್‍ಐಆರ್ ದಾಖಲಿಸದೇ ಇರುವ ಹಿನ್ನೆಲೆಯಲ್ಲಿ ಅವರು ಕೋರ್ಟ್ ಮೆಟ್ಟಿಲು ಹತ್ತಿದ್ದರು.
ಸಲ್ಮಾನ್ ಖುರ್ಷೀದ್ ಅವರ ಕೃತಿ ಸಾಕಷ್ಟು ವಿವಾದಕ್ಕೀಡಾಗಿದೆಯಲ್ಲದೆ ಅದನ್ನು ವಿರೋಧಿಸಿ ನೈನಿತಾಲ್‍ನಲ್ಲಿರುವ ಖುರ್ಷೀದ್ ಅವರ ಮನೆಯಲ್ಲಿ ದುಷ್ಕರ್ಮಿಗಳು ದಾಂಧಲೆಯನ್ನೂ ನಡೆಸಿದ್ದರು.