ಕಾರ್ಕಳ ಪುರಸಭೆಯ ಸೊತ್ತುಗಳನ್ನು ರಕ್ಷಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ವಿಪಕ್ಷ ಆರೋಪ
ಪುರಸಭಾ ಮಾಸಿಕ ಸಭೆ

ಕಾರ್ಕಳ, ಡಿ.23: ಪುರಸಭೆಯ ಸೊತ್ತುಗಳನ್ನು ರಕ್ಷಿಸುವಲ್ಲಿ ಪುರಸಭಾ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಗುರುವಾರ ನಡೆದ ಕಾರ್ಕಳ ಪುರಸಭಾ ಮಾಸಿಕ ಸಭೆಯಲ್ಲಿ ವಿಪಕ್ಷ ಸದಸ್ಯರಿಂದ ವ್ಯಕ್ತವಾಯಿತು.
ಪುರಸಭಾ ಅಧ್ಯಕ್ಷೆ ಸುಮಾ ಕೇಶವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಿಪಕ್ಷ ಮುಖಂಡ ಅಶ್ಫಾಕ್ ಅಹ್ಮದ್, ಪುರಸಭಾ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುತ್ತಿರುವ ಮುಂಡ್ಲಿ ಜಲಾಶಯದ ನೀರು ಸಂಗ್ರಾಹಾರಕ್ಕೆ ಹಾಕಿದ್ದ ಸುಮಾರು 125 ಕಿಲೋ ಭಾರದ 160 ಗೇಟುಗಳು ಏನಾದವು? ಮಸ್ತಕಾಭಿಷೇಕ ಸಂದರ್ಭದಲ್ಲಿ ಪುರಸಭೆ ಖರೀದಿಸಿದ್ದ ಲಕ್ಷಾಂತರ ರೂ. ಮೌಲ್ಯದ ಓವರ್ ಹೆಡ್ ಟ್ಯಾಂಕ್, ನೀರು ಸರಬರಾಜು ಕೇಂದ್ರಗಳಲ್ಲಿ ಅಳವಡಿಸಿದ ಬಿಡಿಭಾಗಗಳು ಈಗ ಎಲ್ಲಿವೆ? ಅವು ಏನಾದವು ಎಂದು ಪ್ರಶ್ನಿಸಿದರು.
ಕಳೆದ ಸಭೆಯಲ್ಲಿ ಅಂಗಡಿ ಮಳಿಗೆಗಳ ಬಾಡಿಗೆ ಸಂಗ್ರಹದಲ್ಲಿ ಅವ್ಯವಹಾರ ನಡೆದಿದೆ. ಇದರಲ್ಲಿ ಪುರಸಭಾ ಅಧಿಕಾರಿಗಳೇ ಶಾಮೀಲಾಗಿದ್ದು, ಮುಂದಿನ ಸಭೆಯಲ್ಲಿ ಅಂತಹ ಅಧಿಕಾರಿಗಳ ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ವಿಪಕ್ಷ ಸದಸ್ಯ ಸೋಮನಾಥ ನಾಯ್ಕ್ ಸವಾಲೆಸೆದಿದ್ದರು. ಈ ವಿಚಾರವನ್ನು ಇಂದಿನ ಸಭೆಯಲ್ಲಿ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಯೋಗಿಶ್ ದೇವಾಡಿಗ, ಅಂಗಡಿ ಮಳಿಗೆಗಳ ಬಾಡಿಗೆ ಸಂಗ್ರಹದಲ್ಲಿನ ಅವ್ಯವಹಾರವನ್ನು ಸೋಮನಾಥ ನಾಯ್ಕ ಈ ಸಭೆಯಲ್ಲಿ ಸಾಬೀತುಪಡಿಸಬೇಕೆಂದು ಪಟ್ಟು ಹಿಡಿದರು. ಈ ವಿಚಾರ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.
ಈ ವೇಳೆ ಮಾತನಾಡಿದ ಸೋಮನಾಥ ನಾಯ್ಕ್, ಸುಮಾರು ಒಂದು ವರ್ಷದಿಂದ ಮಾಹಿತಿ ಹಕ್ಕಿನಡಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಕೇಳಿದ್ದೆ. ಆದರೆ ಅಧಿಕಾರಿಗಳು ಇದುವರೆಗೆ ಮಾಹಿತಿ ನೀಡಿಲ್ಲ. ಇದು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಪುರಾವೆಯಲ್ಲವೇ? ಇಲ್ಲದಿದ್ದರೆ ಯಾಕೆ ಮಾಹಿತಿ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಸದಸ್ಯರುಗಳಾದ ಯೋಗೀಶ್ ದೇವಾಡಿಗ, ಪ್ರದೀಪ್ ಮಾರಿಗುಡಿ, ಪ್ರಸನ್ನ ತಾವು ಆರೋಪ ಮಾಡಿದ ಆ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿ ಎಂದು ಒತ್ತಾಯಿಸಿದರು.
ಸದಸ್ಯ ಶುಭದ ರಾವ್ ಮಾತನಾಡಿ, ಪುರಸಭಾ ವ್ಯಾಪ್ತಿಯ ಕಾಳಿಕಾಂಬ ಬಳಿಯ ನೂತನ ಉದ್ಯಾನವನಕ್ಕೆ ಮಾಜಿ ಪುರಸಭಾ ಅಧ್ಯಕ್ಷ, ದಿವಂಗತ ಪ್ರದೀಪ್ ಕೋಟ್ಯಾನ್ ಹೆಸರಿಡಬೇಕೆಂದು ಆಗ್ರಹಿಸಿದರು.
ವೇದಿಕೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಥಾಯಿ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ ನಾರಾಯಣ ಮಲ್ಯ ಉಪಸ್ಥಿತರಿದ್ದರು.
ಪುರಸಭಾ ಸದಸ್ಯರುಗಳಾದ ವಿನ್ನಿ ಬೋಲ್ಡ್ ಮೆಂಡೋನ್ಸ, ಸೋಮನಾಥ ನಾಯ್ಕ್, ರಹ್ಮತ್ ಎನ್. ಶೇಖ್, ಪ್ರತಿಮಾ, ಸೀತಾರಾಮ, ನಳಿನಿ ಆಚಾರ್ಯ, ಹರೀಶ್ ದೇವಾಡಿಗ, ಪ್ರಶಾಂತ ಕೋಟ್ಯಾನ್, ನೀತಾ ಆಚಾರ್ಯ, ಶೋಭಾ ದೇವಾಡಿಗ, ಮಮತಾ, ಸುನೀತಾ ಶೆಟ್ಟಿ, ಪ್ರಭಾ ಕಿಶೋರ್, ಮೀನಾಕ್ಷಿ ಗಂಗಾದರ್ ಪ್ರವೀಣ್ ಚಂದ್ರ ಶೆಟ್ಟಿ, ನಾಮನಿರ್ದೇಶಿತ ಸದಸ್ಯರಾದ ಅವಿನಾಶ್ ಶೆಟ್ಟಿ, ಸಂತೋಷ್ ರಾವ್, ಪ್ರಸನ್ನ, ಸಂಧ್ಯಾ ಮಲ್ಯ, ಅಶೋಕ್ ಸುವರ್ಣ ಚರ್ಚೆಯಲ್ಲಿ ಭಾಗವಹಿಸಿದ್ದರು.







