ಗದ್ದಲದ ಮಧ್ಯೆ ವಿಧಾನಸಭೆಯಲ್ಲಿ 'ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ' ಅಂಗೀಕಾರ

ಬೆಳಗಾವಿ: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021 ಕ್ಕೆ ಭಾರೀ ವಿರೋಧದ ಮಧ್ಯೆ ವಿಧಾನಸಭೆಯಲ್ಲಿ ಅಂಗೀಕಾರ ದೊರಕಿದೆ.
ಕಲಾಪದಲ್ಲಿ ವಿಪಕ್ಷ ಸದಸ್ಯರ ಭಾರೀ ವಿರೋಧದ ಮಧ್ಯೆ ಮತಾಂತರ ನಿಷೇಧ ವಿಧೇಯಕಕ್ಕೆ ಸದಸ್ಯರ ಧ್ವನಿಮತದ ಮೂಲಕ ವಿಧಾನಸಭೆ ಒಪ್ಪಿಗೆ ನೀಡಿದೆ.
ವಿಧೇಯಕದ ಪ್ರಮುಖ ಅಂಶಗಳು:
ದೂರು ದಾಖಲಿಸಲು ಅವಕಾಶ: ಯಾರೇ ಮತಾಂತರಗೊಂಡ ವ್ಯಕ್ತಿ, ಆತನ ಪಾಲಕರು, ಸೋದರ, ಸೋದರಿ ಅಥವಾ ಆತನ ರಕ್ತ ಸಂಬಂಧಿ, ಮದುವೆ ಅಥವಾ ದತ್ತು ಮೂಲಕ ಸಂಬಂಧಿ ದೂರು ನೀಡಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಯಾವುದೇ ವ್ಯಕ್ತಿಯನ್ನು ಆಮಿಷ, ಬಲವಂತ, ಒತ್ತಾಯದ ಮೂಲಕ ಮತಾಂತರಕ್ಕೆ ಮೂರು ವರ್ಷಗಳಿಂದ 5 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ, 25 ಸಾವಿರ ರೂ.ದಂಡ ವಿಧಿಸಬಹುದಾಗಿದೆ. ಅಪ್ರಾಪ್ತ ಅಥವಾ ಅಸ್ವಸ್ಥಚಿತ್ತ ವ್ಯಕ್ತಿ ಅಥವಾ ಮಹಿಳೆ ಅಥವಾ ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿದವರನ್ನು ಮತಾಂತರ ಮಾಡಿದರೆ 3 ವರ್ಷದಿಂದ 10 ವರ್ಷ ಜೈಲು ಶಿಕ್ಷೆ ಅಥವಾ 50ಸಾವಿರ ರೂ.ದಂಡ, ಸಾಮೂಹಿಕ ಮತಾಂತರಕ್ಕೆ 3ರಿಂದ 10ವರ್ಷ ಜೈಲು ಶಿಕ್ಷೆ, 1ಲಕ್ಷ ರೂ.ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಮದುವೆ ಅಸಿಂಧು: ಒಂದು ಧರ್ಮದ ಪುರುಷ ಮತ್ತೊಂದು ಧರ್ಮದ ಮಹಿಳೆಯೊಂದಿಗೆ ಮದುವೆಗೆ ಮುಂಚೆ ಅಥವಾ ನಂತರ ಆತನೆ, ಆಕೆಯೇ ಮತಾಂತರಗೊಳ್ಳುವ ಮೂಲಕ ಕಾನೂನು ಬಾಹಿರ ಮತಾಂತರ ಅಥವಾ ವಿಪರ್ಯಯದ ಏಕಮಾತ್ರ ಉದ್ದೇಶಕ್ಕಾಗಿ ಮಾಡಿದ ಮದುವೆ ಅಸಿಂಧು ಎಂದು ಘೋಷಿಸುವುದು.
ಉದ್ದೇಶ: ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಖಾತ್ರಿಗೊಳಿಸಲಾಗಿದೆ. ಯಾವುದೇ ವ್ಯಕ್ತಿ ತಮ್ಮ ಆಯ್ಕೆಯ ಯಾವುದೇ ಧರ್ಮವನ್ನು ಅಂಗೀಕರಿಸಲು, ಆಚರಿಸಲು ಮತ್ತು ಪ್ರಸಾರ ಮಾಡಲು ಮುಕ್ತ. ರಾಜ್ಯದಲ್ಲಿ ಆಮಿಷ, ಒತ್ತಾಯ, ಬಲವಂತದ ಮತಾಂತರ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿವೆ. ಹೀಗಾಗಿ ಇಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ಇಂತ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಶಿಕ್ಷಿಸಲು ಅವಕಾಶ ಕಲ್ಪಿಸಲು ಈ ವಿಧೇಯಕವನ್ನು ತರಲಾಗಿದೆ ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.







