ವಿದೇಶಗಳಿಂದ ರಾಜ್ಯಕ್ಕೆ ಬಂದ 12 ಜನರಲ್ಲಿ ಒಮೈಕ್ರಾನ್ ದೃಢ: ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು, ಡಿ.23: ಕೊರೋನ ವೈರಸ್‍ನ ಹೊಸ ತಳಿ ಒಮೈಕ್ರಾನ್ ಸೋಂಕು ದೃಢಪಟ್ಟ 12 ಹೊಸ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಒಮೈಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಸೋಂಕಿತರಲ್ಲಿ ಹೆಚ್ಚಿನವರು ಬೆಂಗಳೂರು ಮೂಲದವರಾಗಿದ್ದು, ಬ್ರಿಟನ್, ಡೆನ್ಮಾರ್ಕ್, ಘಾನಾ, ನೈಜೀರಿಯಾ ಹಾಗೂ ಸ್ವಿಡ್ಜಲೆರ್ಂಡ್‍ನಿಂದ ಹಿಂದಿರುಗಿದ್ದರು. ಹತ್ತು ಜನರು ಬೆಂಗಳೂರಿನವರು, ಮೈಸೂರು ಮತ್ತು ಮಂಗಳೂರಿನ ತಲಾ ಒಬ್ಬರು ಪ್ರಯಾಣಿಕರಿಗೆ ಒಮೈಕ್ರಾನ್ ಸೋಂಕು ತಗುಲಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಟ್ವೀಟಿಸಿದ್ದಾರೆ.
ಎಲ್ಲಿಂದ ಬಂದವರು?
ಘಾನಾದಿಂದ ಮಂಗಳೂರಿಗೆ ಹಿಂತಿರುಗಿದ 27 ವರ್ಷ ಪುರುಷ, ಯುಕೆಯಿಂದ ಬೆಂಗಳೂರಿಗೆ ಬಂದ 31 ವರ್ಷದ ಪುರುಷ, 42 ವರ್ಷ ಪುರುಷ, 18 ವರ್ಷದ ಯುವತಿ, 21 ವರ್ಷದ ಯುವಕನಿಗೆ ಹಾಗೂ ಡೆನ್ಮಾರ್ಕ್‍ನಿಂದ ಹಿಂತಿರುಗಿದ 49 ವರ್ಷದ ಮಹಿಳೆ ಸೇರಿದಂತೆ 20 ವರ್ಷದ ಯುವತಿ, 56 ವರ್ಷ ಪುರುಷ, 54 ವರ್ಷ ಮಹಿಳೆ, ಒಮೈಕ್ರಾನ್ ದೃಢಪಟ್ಟಿದೆ.
ಇನ್ನು ಯುಕೆಯಿಂದ ಹಿಂತಿರುಗಿದ 11 ವರ್ಷದ ಬಾಲಕಿ, ನೈಜೀರಿಯಾದಿಂದ ಹಿಂತಿರುಗಿದ 59 ವರ್ಷದ ಮಹಿಳೆಗೆ ಮತ್ತು ಸ್ವಿಟ್ಜಲೆರ್ಂಡ್‍ನಿಂದ ಹಿಂತಿರುಗಿದ 9 ವರ್ಷದ ಬಾಲಕಿಗೆ ಈ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.