ಕೊಪ್ಪ: ಜಮೀನು ದಾಖಲೆ ನೀಡಲು ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ

ಚಿಕ್ಕಮಗಳೂರು, ಡಿ.23: ಜಮೀನು ದಾಖಲೆ ನೀಡಲು ಮಹಿಳೆಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕಂದಾಯ ಇಲಾಖೆ ಆರ್ ಬಿಐ ಒಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಗುರುವಾರ ವರದಿಯಾಗಿದೆ.
ಎಸಿಬಿ ದಾಳಿ ವೇಳೆ ಲಂಚ ಸ್ವೀಕರಿಸುತ್ತಿದ್ದ ಕೊಪ್ಪ ತಾಲೂಕು ಹರಿಹರಪುರ ಕಂದಾಯ ನಿರೀಕ್ಷಕ ಕಿರಣ್ ಆರೋಪಿಯಾಗಿದ್ದು, ಈತ ಗುರುವಾರ ಕೊಪ್ಪ ಪಟ್ಟಣದ ತಾಲೂಕು ಕಚೇರಿಯಲ್ಲಿ ಮಹಿಳೆಯಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಪೊಲೀಸರ ಬಲೆ ಬಿದ್ದಿದ್ದಾನೆಂದು ತಿಳಿದು ಬಂದಿದೆ.
ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿ ವ್ಯಾಪ್ತಿಯಲ್ಲಿ ಯಶ್ವಿತ್ ಎಂಬವರು ಜಮೀನು ಹೊಂದಿದ್ದು, ಈ ಜಮೀನಿನ ದಾಖಲೆಗಳಿಗಾಗಿ ಮಹಿಳೆ ಕೊಪ್ಪ ಪಟ್ಟಣದ ಬಾಳಗಡಿಯಲ್ಲಿರುವ ಆರ್‍ಐ ಕಚೇರಿಗೆ ಹೋಗಿದ್ದರು. ಈ ವೇಳೆ ಆರ್‍ಐ ಕಿರಣ್ ಲಂಚಕ್ಕಾಗಿ ಮಹಿಳೆಯನ್ನು ಪೀಡಿಸಿದ್ದರು ಎನ್ನಲಾಗಿದ್ದು, ಬುಧವಾರ ಆರ್‍ಐ ಕಿರಣ್ ಅವರಿಗೆ 2 ಸಾವಿರ ರೂ. ನೀಡಿದ್ದ ಮಹಿಳೆ ಉಳಿದ ಹಣವನ್ನು ಗುರುವಾರ ನೀಡುವುದಾಗಿ ತಿಳಿಸಿ, ಎಸಿಬಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.
ಅದರಂತೆ ಗುರುವಾರ ತಾಲೂಕು ಕಚೇರಿಗೆ ತೆರಳಿದ್ದ ಮಹಿಳೆಯಿಂದ ಆರ್‍ಐ ಕಿರಣ್ 6 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಈ ವೇಳೆ ಅಧಿಕಾರಿ ಕಿರಣ್ ಲಂಚದ ಹಣ ಸಹಿತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಘಟನೆ ಸಂಬಂಧ ಎಸಿಬಿ ಪೊಲೀಸರು ಅಧಿಕಾರಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.







