ರಾಜಸ್ಥಾನ: ಅಕ್ರಮ ಮದ್ಯ ದಂಧೆ ವಿರುದ್ಧ ದೂರು ನೀಡಿದ ಸಾಮಾಜಿಕ ಕಾರ್ಯಕರ್ತನ ಅಪಹರಿಸಿ ಚಿತ್ರಹಿಂಸೆ

ಸಾಂದರ್ಭಿಕ ಚಿತ್ರ:PTI
ಜೈಪುರ,ಡಿ.23: ಅಕ್ರಮ ಮದ್ಯ ವ್ಯಾಪಾರ ಹಾಗೂ ಮದ್ಯದಂಗಡಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ಸಾಮಾಜಿಕ ಕಾರ್ಯಕರ್ತರೊಬ್ಬರನ್ನು ಅಪಹರಿಸಿದ ಅಪರಿಚಿತ ದುಷ್ಕರ್ಮಿಗಳ ಗುಂಪೊದು ಅವರಿಗೆ ಚೂಪಾದ ಮೊಳೆಗಳಿಂದ ಚುಚ್ಚಿ ಚಿತ್ರಹಿಂಸೆ ನೀಡಿದ ಘಟನೆ ರಾಜಸ್ಥಾನದ ಬಾರ್ಮೆರ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬಸ್ ನಿಲ್ದಾಣದಿಂದ ಮನೆಗೆ ವಾಪಾಸಾಗುತ್ತಿದ್ದ 30 ವರ್ಷ ವಯಸ್ಸಿನ ಸಾಮಾಜಿಕ ಕಾರ್ಯಕರ್ತ ಅಮ್ರಾ ರಾಮ್ನನ್ನು ಅಪಹರಿಸಿದ ದುಷ್ಕರ್ಮಿಗಳು ಆತನಿಗೆ ಮೊಳೆಗಳನ್ನು ಚುಚ್ಚಿ ಚಿತ್ರಹಿಂಸೆ ನೀಡಿದ್ದರು. ಬಳಿಕ ಆತ ಸತ್ತನೆಂದು ಭಾವಿಸಿದ ಅವರು ಸ್ಥಳದಿಂದ ಪರಾರಿಯಾಗಿದ್ದರು. ರಾಮ್ ಈಗ ಜೋಧ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆಂದು ವರದಿಗಳು ತಿಳಿಸಿವೆ. ದುಷ್ಕರ್ಮಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರಾಮ್ ಅವರಿಗೆ ಗಂಭೀರವಾದ ಗಾಯಗಳಾಗಿದ್ದು, ಅವರ ಕಾಲು ಹಾಗೂ ಕೈಗಳ ಮೂಳೆಗಳು ಮುರಿದಿವೆ. ದುಷ್ಕರ್ಮಿಗಳ ಬಂಧನಕ್ಕೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಬಾರ್ಮೆರ್ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪಕ್ ಭಾರ್ಗವ ತಿಳಿಸಿದ್ದಾರೆ. ‘‘ರಾಮ್ ಅವರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ವ್ಯಾಪಾರದ ವಿರುದ್ಧ ದೂರು ನೀಡಿದ್ದರು. ಆ ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮ ಮದ್ಯದಾಸ್ತಾನನ್ನು ವಶಪಡಿಸಿಕೊಂಡಿದ್ದರು’’ ಎಂದು ಭಾರ್ಗವ ತಿಳಿಸಿದ್ದಾರೆ.
ಘಟನೆಯನ್ನು ರಾಜಸ್ಥಾನದ ಮಾನವಹಕ್ಕುಗಳ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದ ಪೊಲೀಸ್ ವರಿಷ್ಠರಿಂದ ಈ ಬಗ್ಗೆ ವರದಿಯನ್ನು ಕೇಳಿದೆ. ಅಕ್ರಮ ಮಾರಾಟ ದಂಧೆಯಲ್ಲಿ ತೊಡಗಿರುವವರು ಈ ದಾಳಿಯ ಹಿಂದಿದ್ದಾರೆಂದು ಮೇಲ್ನೋಟಕ್ಕೆ ಕಂಡುಬಂದಿದೆಯೆಂದು ಭಾರ್ಗವ ತಿಳಿಸಿದ್ದಾರೆ.