3574.67 ಕೋಟಿ ರೂ.ಮೊತ್ತದ ಪೂರಕ ಅಂದಾಜಿಗೆ ವಿಧಾನಸಭೆ ಒಪ್ಪಿಗೆ

ಬೆಳಗಾವಿ, ಡಿ.23: ವಿಧಾನಸಭೆಯಲ್ಲಿ 3574.67 ಕೋಟಿ ರೂ.ಮೊತ್ತದ ಪೂರಕ ಅಂದಾಜುಗಳ ಎರಡನೆ ಕಂತಿಗೆ ಗುರುವಾರ ಒಪ್ಪಿಗೆ ಸಿಕ್ಕಿತು.
ಪೂರಕ ಅಂದಾಜುಗಳಲ್ಲಿ ಒದಗಿಸಿರುವ ಒಟ್ಟು ಮೊತ್ತ 3574.67 ಕೋಟಿ ರೂ.ಗಳಲ್ಲಿ, 84.68 ಕೋಟಿ ರೂ.ಗಳು ಪ್ರಭೃತ್ವ ವೆಚ್ಚ ಮತ್ತು 3489.99 ಕೋಟಿ ರೂ.ಗಳು ಪುರಸ್ಕೃತ ವೆಚ್ಚ ಸೇರಿರುತ್ತವೆ. ಇದರಲ್ಲಿ 156.08 ಕೋಟಿ ರೂ.ಗಳು ಸಹ ಪುರಸ್ಕೃತವಾಗಬೇಕಾಗಿದ್ದು, ಇದನ್ನು ರಿಸರ್ವ್ ಫಂಡ್ ಠೇವಣಿಗಳಿಂದ ಭರಿಸಲಾಗುತ್ತದೆ.
ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ 3418.59 ಕೋಟಿ ರೂ.ಗಳು. ಇದರಲ್ಲಿ 599.03 ಕೋಟಿ ರೂ.ಗಳು ಕೇಂದ್ರ ಸಹಾಯಕ್ಕೆ ಸಂಬಂಧಿಸಿವೆ. ಆದುದರಿಂದ, ಹೊರ ಹೋಗುವ ನಿವ್ವಳ ನಗದು ಮೊತ್ತ 2819.56 ಕೋಟಿ ರೂ.ಗಳಾಗಿರುತ್ತವೆ. ಇದನ್ನು ವೆಚ್ಚದ ಸೂಕ್ತ ಪರಿಷ್ಕೃತ ಆದ್ಯತೆಯ ಆಧಾರದ ಮೇಲೆ ಭರಿಸಲಾಗುವುದು.
ಶಾಸಕಾಂಗದಿಂದ ಅನುಮೋದನೆಗೊಂಡ ಈ ಪೂರಕ ಅಂದಾಜು(ಎರಡನೆ ಕಂತು)ಗಳಲ್ಲಿರುವ ಮೊತ್ತದ ವಾಸ್ತವಿಕ ಬಿಡುಗಡೆಯನ್ನು ರಾಜ್ಯ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಹಾಗೂ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ, 2002 ನಿಬಂಧನೆಗಳಿಗೆ ಅನುಗುಣವಾಗಿ ಮಾಡಲಾಗುವುದು ಎಂದು ಸರಕಾರ ತಿಳಿಸಿದೆ.





