ಉಡುಪಿಯನ್ನು ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಿ: ಡಿಸಿ ಕೂರ್ಮಾರಾವ್ ಕರೆ

ಉಡುಪಿ, ಡಿ.23: ಜಿಲ್ಲೆಯಲ್ಲಿ ಅಧಿಕ ಕ್ಷಯರೋಗ ತಪಾಸಣೆ ನಡೆಸುವು ದರೊಂದಿಗೆ ಪ್ರಾಥಮಿಕ ಹಂತದಲ್ಲಿಯೇ ಇದನ್ನು ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ನೀಡಿ ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಜಿಲಾ್ಲಧಿಕಾರಿ ಕೂರ್ಮಾರಾವ್ ಎಂ ಹೇಳಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಟಿ.ಬಿ ಫೋರಂ ಸಮಿತಿ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಕ್ಷಯರೋಗಿಗಳ ಸಂಖ್ಯೆಯು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಕಂಡು ಬರುತ್ತಿದೆ. ಇದರ ಸಂಪೂರ್ಣ ನಿಯಂತ್ರಣಕ್ಕೆ ಅಗತ್ಯರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಸಂಶಯಾಸ್ಪದ ಕ್ಷಯರೋಗ ಲಕ್ಷಣ ಹೊಂದಿರುವವರನ್ನು ಗುರುತಿಸಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದಾಗ ಇದರ ನಿಯಂತ್ರಣ ಸಾಧ್ಯ ಎಂದರು.
ಕ್ಷಯರೋಗದ ಹರಡುವಿಕೆ, ಅವುಗಳ ಸಾಮಾನ್ಯ ಲಕ್ಷಣ ಬಗ್ಗೆ ಜನರಲ್ಲಿ ಅರಿವು ಮೂಡಿಸಿದಾಗ ಜನರು ಆ ಬಗ್ಗೆ ಕಾಳಜಿ ತೋರಿ ನಿರ್ಲಕ್ಷ್ಯ ವಹಿಸದೇ ಸೂಕ್ತ ಪರೀಕ್ಷೆ ಹಾಗೂ ಚಿಕಿತ್ಸೆಗೆ ಒಳಗಾಗುತ್ತಾರೆ. ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಜಿಲ್ಲೆಯ ಯಾವ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಟಿ.ಬಿ ಸೋಂಕಿತರು ಅಧಿಕ ಪ್ರಮಾಣದಲ್ಲಿ ಇದ್ದಾರೆ ಎನ್ನುವ ಬಗ್ಗೆ ನಿಖರ ಮಾಹಿತಿಗಳನ್ನು ಹೊಂದುವುದರೊಂದಿಗೆ ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಿವು ಮೂಡಿಸುವ ಜೊತೆಗೆ ಪರೀಕ್ಷಾ ಕಾರ್ಯಗಳನ್ನು ಹೆಚ್ಚು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಕ್ಷಯ ರೋಗ ಸೋಂಕಿತರಿಗೆ ಪೌಷ್ಠಿಕಾಂಶಗಳನ್ನು ಒದಗಿಸುವ ಉದ್ಧೇಶದಿಂದ ಸರಕಾರ ನಿಕ್ಷಾ ಪೋಕ್ಷಣಾ ಆಭಿಯಾನದಡಿಯಲ್ಲಿ ಪ್ರತಿ ತಿಂಗಳು 500 ರೂ. ಗಳನ್ನು ನೀಡುತ್ತಿದೆ. ಇದನ್ನು ಸೂಕ್ತ ಸಮಯದಲ್ಲಿ ರೋಗಿಗಳಿಗೆ ತಲುಪಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದರು.
ಎಚ್‌ಐವಿ ಸೋಂಕು ಯಾವ ರೀತಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ಆಗಿಂದಾಗ್ಗೆ ಮಾಡುವುದರಿಂದ ಇದರ ಹರಡುವಿಕೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಸರಕಾರದಿಂದ ನೀಡುವ ನಿವೇಶನ ಹಾಗೂ ವಸತಿ ಸೌಕರ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವ ಸಂದರ್ಭದಲ್ಲಿ, ಎಚ್‌ಐವಿ ಸೋಂಕಿತ ಕುಟುಂಬ ದವರಿಗೆ ವಿಶೇಷ ವರ್ಗ ಯೋಜನೆಯಡಿಯಲ್ಲಿ ಆದ್ಯತೆಯ ಮೇಲೆ ಇವರು ಗಳನ್ನು ಫಲಾನುವಿಭಗಳಾಗಿ ಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಡಿಹೆಚ್‌ಓ ಡಾ. ನಾಗಭೂಷಣ ಉಡುಪ, ಜಿಲ್ಲಾ ಏಡ್ಸ್ ಮತ್ತು ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಹಾಗೂ ಅರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.







