ಟ್ರೀಪಾರ್ಕ್‌ನಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿ: ಡಿಎಫ್‌ಓ ಆಶೀಶ್ ರೆಡ್ಡಿ

ಉಡುಪಿ, ಡಿ.23: ಉಡುಪಿ ನಗರದ ಮಣಿಪಾಲ ಬಡಗುಬೆಟ್ಟು ವ್ಯಾಪ್ತಿಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರ ಸುರಕ್ಷತೆ, ಸ್ವಚ್ಛತೆ ಸೇರಿದಂತೆ ಮತ್ತಿತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇಲೆ ಕೈಗೊಂಡು ಹೆಚ್ಚು ಜನರು ಬರುವಂತೆ ಉತ್ತೇಜಿಸುವ ಕೆಲಸವಾಗಬೇಕು ಎಂದು ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಸೂಚಿಸಿದ್ದಾರೆ.
ಗುರುವಾರ ಮಣಿಪಾಲದ ಟ್ರೀಪಾರ್ಕ್‌ನಲ್ಲಿ ನಡೆದ ಉದ್ಯಾನವನ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ನಗರದ ಹೊರವಲಯದಲ್ಲಿರುವ ಸಾಲು ಮರದ ತಿಮ್ಕಕ್ಕ ಉದ್ಯಾನವನಕ್ಕೆ ಭೇಟಿ ನೀಡುವುದು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದಷ್ಟೇ ಅನುಭವ ನೀಡುತ್ತದೆ. ಇದು ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ವಾಯು, ನಿಶ್ಯಬ್ಧ ವಾತಾವರಣ ಜೊತೆಗೆ ಪ್ರಕೃತಿ ಸೊಬಗು ಸವಿಯುವ ಪ್ರದೇಶವಾಗಿದೆ ಎಂದು ಅಭಿಪ್ರಾಯಪಟ್ಟರು.
ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅಗತ್ಯವಿರುವ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಉಪಾಹಾರ ಗೃಹ, ವಿಶ್ರಾಂತಿ ಕುಟೀರಗಳು, ಶೌಚಾಲಯ ವ್ಯವಸ್ಥಿತ ರೀತಿಯಲ್ಲಿ ಇರುವಂತೆ ದುರಸ್ಥಿ ಕಾರ್ಯಗಳನ್ನು ಆಗಿಂದಾಗ್ಗೆ ಕೈಗೊಳ್ಳಬೇಕು ಎಂದರು.
ಮಣಿಪಾಲದ ಸಮೀಪವಿರುವ ಈ ಉದ್ಯಾನವನಕ್ಕೆ ಜಿಲ್ಲೆಯ ಜನತೆಯಲ್ಲದೇ ಹೊರಗಿನಿಂದ ಆಗಮಿಸುವ ಪ್ರವಾಸಿಗರೂ ಸಹ ಭೇಟಿ ನೀಡಿ ವೀಕ್ಷಿಸಬಹುದಾಗಿದೆ. ಉದ್ಯಾನವನದಲ್ಲಿ ಮಕ್ಕಳ ಆಟಕ್ಕೆ ಅಡ್ವೆಂಚರ್ ಸ್ಪೋರ್ಟ್, ಜಾರುವ ರೋಪ್‌ಗಳು, ವಿವಿಧ ಕಾಡುಪ್ರಾಣಿಗಳ ವಾಸ್ತುಶಿಲ್ಪಗಳು ಮಕ್ಕಳ ಮನಸ್ಸಿಗೆ ಮುದ ನೀಡುವಂತಿವೆ. ಶಾಲಾ ಚಿಕ್ಕ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಇದು ಉತ್ತಮ ತಾಣವಾಗಿದೆ ಎಂದರು.
ಉದ್ಯಾನವನದಲ್ಲಿರುವ ವೀಕ್ಷಣಾ ಗೋಪುರಗಳ ಮರು ನಿರ್ಮಾಣ, ಪಾದಚಾರಿ ಮಾರ್ಗಗಳ ದುರಸ್ಥಿ, ಮಾರ್ಗಸೂಚಿ ಫಲಕಗಳ ಅವಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಸಂಗೀತ, ಯೋಗ, ಧ್ಯಾನ, ವಿವಿಧ ಬರವಣಿಗೆ ಸ್ಪರ್ಧೆಗಳನ್ನು ನಡೆಸುವವರಿಗೆ ಈ ಉದ್ಯಾನವನ ನೆಚ್ಚಿನ ಸ್ಥಳವಾಗಿದೆ ಎಂದ ಅವರು, ಟ್ರೀ ಪಾರ್ಕ್ ವತಿ ಯಿಂದಲೇ ಶಾಲಾ ಮಕ್ಕಳಿಗೆ ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಅಯೋಜಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ಸತೀಶ್ ರೈ, ಸಿಆರ್‌ಝಡ್‌ನ ಪ್ರಾದೇಶಿಕ ನಿರ್ದೇಶಕ ಶ್ರೀಪತಿ ಬಿ.ಎಸ್, ವಾರ್ತಾಧಿಕಾರಿ ಬಿ.ಮಂಜುನಾಥ್, ಡಿಡಿಪಿಯು ಮಾರುತಿ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಉಡುಪಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ, ಉದ್ಯಾವರ ಆರ್ಯುವೇದ ಕಾಲೇಜಿನ ಚೈತ್ರಾ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.







