ಮಡಗಾಸ್ಕರ್: ದೋಣಿ ಮುಳುಗಿದ ದುರಂತದಲ್ಲಿ ಮೃತರ ಸಂಖ್ಯೆ 85ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ
ಅಂಟಾನನಾರಿಯೊ, ಡಿ.23: ಮಡಗಾಸ್ಕರ್ನ ಈಶಾನ್ಯ ತೀರದ ಬಳಿ ಸೋಮವಾರ ದೋಣಿಯೊಂದು ಸಮುದ್ರದಲ್ಲಿ ಮುಳುಗಿದ್ದು ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 85ಕ್ಕೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
12 ಅಡಿ ಉದ್ದದ, ಮರದಿಂದ ಮಾಡಿದ ಸರಕು ಸಾಗಿಸುವ ದೋಣಿಯಲ್ಲಿ ಸೋಮವಾರ 138 ಮಂದಿ ಪ್ರಯಾಣಿಸುತ್ತಿದ್ದಾಗ ಅಂಟ್ಸೆರಾಕಾ ಗ್ರಾಮದ ಬಳಿ ದೋಣಿ ಸಮುದ್ರದಲ್ಲಿ ಮುಳುಗಿದೆ. ಈ ದೋಣಿಯಲ್ಲಿ ಪ್ರಯಾಣಿಕರ ಸಾಗಾಟಕ್ಕೆ ಅನುಮತಿ ಇರಲಿಲ್ಲ. ಮುಳುಗಿದ್ದ ದೋಣಿಯಿಂದ 50 ಮಂದಿಯನ್ನು ರಕ್ಷಿಸಲಾಗಿದೆ. ಮಡಗಾಸ್ಕರ್ ಪೊಲೀಸ್ ಇಲಾಖೆಯ ಸಚಿವರು ಹಾಗೂ ಪೊಲೀಸ್ ಸಿಬಂದಿಯೊಬ್ಬರು 12 ಗಂಟೆ ಈಜಿ ದಡ ಸೇರಿದ್ದಾರೆ. ದೋಣಿಯ ಇಂಜಿನ್ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಸ್ಥಳೀಯರಾಗಿದ್ದು ಲಾರಿಯಲ್ಲಿ ಅವರ ಮೃತದೇಹಗಳನ್ನು ಸ್ಮಶಾನಕ್ಕೆ ಸಾಗಿಸಲಾಗಿದೆ ಎಂದು ಮೇಯ್ ಅಲ್ಬಾನ್ ಮೆನಾವೊಲೊ ಹೇಳಿದ್ದಾರೆ.
ದುರಂತದ ಮಾಹಿತಿ ದೊರೆತೊಡನೆ ರಾಜಧಾನಿಯಿಂದ ಘಟನೆಯ ಸ್ಥಳಕ್ಕೆ ತೆರಳುತ್ತಿದ್ದ ಪೊಲೀಸ್ ಇಲಾಖೆಯ ಸಹಾಯಕ ಸಚಿವ ಸೆರ್ಗೆ ಗೆಲೆ ಅವರಿದ್ದ ಹೆಲಿಕಾಪ್ಟರ್ ಸಮುದ್ರಕ್ಕೆ ಪತನವಾಗಿದೆ. ಆದರೆ ಸಚಿವರು ಹಾಗೂ ಒಬ್ಬ ಪೊಲೀಸ್ ಸಿಬಂದಿ ಸುಮಾರು 12 ಗಂಟೆ ಸಮುದ್ರದಲ್ಲಿ ಈಜಿ ದಡ ಸೇರಿದ್ದಾರೆ.





