ಮಾನವಹಕ್ಕುಗಳ ಹೋರಾಟಗಾರ ಖುರ್ರಮ್ ಪರ್ವೇಝ್ ಬಿಡುಗಡೆಗೆ ವಿಶ್ವಸಂಸ್ಥೆಯ ಮಾನವಹಕ್ಕು ತಜ್ಞರ ಆಗ್ರಹ

ಖುರ್ರಮ್ ಪರ್ವೇಝ್(photo:twitter/@KhurramParvez)
ಹೊಸದಿಲ್ಲಿ,ಡಿ.23: ಕಾಶ್ಮೀರದ ಮಾನವಹಕ್ಕುಗಳ ಹೋರಾಟಗಾರ ಖುರ್ರಮ್ ಪರ್ವೇಝ್ ಅವರ ಬಂಧನವು ಮಾನವಹಕ್ಕುಗಳ ಕಾರ್ಯಕರ್ತನಾಗಿ ಆತನ ಕಾನೂನುಸಮ್ಮತವಾದ ಚಟುವಟಿಕೆಗಳಿಗೆ ಪ್ರತೀಕಾರವನ್ನು ಎಸಗಿದ ನೂತನ ನಿದರ್ಶನವಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳಿಗಾಗಿನ ರಾಯಭಾರಿ (ಯುಎನ್ಓಎಚ್ಸಿಎಚ್ಆರ್) ಕಾರ್ಯಾಲಯದ ಪರಿಣಿತರು ಗುರುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹಾಗೂ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಭಾರತ ಸರಕಾರಕ್ಕೆ ಕರೆ ನೀಡಿದ್ದಾರೆ.
ಪರ್ವೇಝ್ ಅವರ ಶ್ರೀನಗರದ ನಿವಾಸ ಹಾಗೂ ಕಚೇರಿಗಳ ಮೇಲೆ ನವೆಂಬರ್ 22ರಂದು ದಾಳಿ ನಡೆಸಿದ ಬಳಿಕ ರಾಷ್ಟ್ರೀಯ ತನಿಖಾ ತಂಡವು ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯಡಿ ಬಂಧಿಸಿತ್ತು.
‘‘ಜಮ್ಮುಕಾಶ್ಮೀರದಲ್ಲಿ ನಾಗರಿಕರ ಬಲವಂತದ ಕಣ್ಮರೆ ಹಾಗೂ ಕಾನೂನುಬಾಹಿರ ಹತ್ಯೆಗಳ ಸೇರಿದಂತೆ ಮಾನವಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಲು ಪರ್ವೇಝ್ ಅವರು ವ್ಯಾಪಕವಾಗಿ ಶ್ರಮಿಸಿದ್ದರು. ಈ ವಿಷಯವನ್ನು ವಿಶ್ವಸಂಸ್ಥೆಯ ಜೊತೆ ಹಂಚಿಕೊಂಡಿದ್ದಕ್ಕಾಗಿ ಪರ್ವೇಝ್ ಅವರು ಹಲವಾರು ಪ್ರತೀಕಾರಾತ್ಮಕ ಘಟನೆಗಳಿಗೆ ಬಲಿಪಶುವಾಗಬೇಕಾಯಿತು’’ ಎಂದು ಓಎಚ್ಸಿಎಚ್ಆರ್ನ ಹೇಳಿಕೆ ತಿಳಿಸಿದೆ.
ಜಮ್ಮುಕಾಶ್ಮೀರದಲ್ಲಿ ನಾಗರಿಕ ಸಮಾಜದ, ಮಾನವಹಕ್ಕು ಸಂರಕ್ಷಕರ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಲು ಯುಎಪಿಎಯನ್ನು ಸರಕಾರವು ಬೆದರಿಕೆಯ ಸಾಧನವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ನಮಗೆ ವಿಷಾದವಿದೆ. ಹೀಗಾಗಿ ಈ ಕಾಯ್ದೆಯನ್ನು ಭಾರತದದ ಅಂತಾರಾಷ್ಟ್ರೀಯ ಕಾನೂನು ಬಾಧ್ಯತೆಗಳಿಗೆ ಅನುಗುಣವಾಗಿ ಮಾನವಹಕ್ಕುಗಳ ಕಾನೂನಿನ ವ್ಯಾಪ್ತಿಗೆ ಒಳಪಡಿಸಬೇಕೆಂದು ನಾವು ಮತ್ತೊಮ್ಮೆ ಸರಕಾರವನ್ನು ಕೋರುತ್ತಿದ್ದೇವೆ’’ ಎಂದು ಓಎಚ್ಸಿಎಚ್ಆರ್ ವಕ್ತಾರ ರೂಪರ್ಟ್ ಕೊಲ್ವಿಲ್ ತಿಳಿಸಿದ್ದಾರೆ.