ಜಾರ್ಖಂಡ್: ಗೆಳೆಯರಿಂದಲೇ ಹತ್ಯೆಯಾದ ಬಾಲಕನ ಮೃತದೇಹ ಕಾಡಿನಲ್ಲಿ ಪತ್ತೆ

ದೇವಗಡ, ಡಿ. 23: ಹದಿನಾಲ್ಕು ವರ್ಷದ ಬಾಲಕನೋರ್ವನನ್ನು ಆತನ ಗೆಳೆಯರು ಸೇರಿ ಕತ್ತು ಕೊಯ್ದು ಹತ್ಯೆಗೈದು, ಕೈ ಕಾಲು ಕತ್ತರಿಸಿ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ಜಾರ್ಖಂಡ್ ನ ದೇವಗಡ ಜಿಲ್ಲೆಯ ಕಾಡಿನಲ್ಲಿ ಎಸೆದಿರುವ ಘಟನೆ ನಡೆದಿದೆ ಎಂದು ಪೊಲೀಸಲು ಶನಿವಾರ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಬಾಲಕ ನಿಗೂಢವಾಗಿ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿ ಬಾಲಕನ ಕುಟುಂಬ ಬುಧವಾರ ಪ್ರಕರಣ ದಾಖಲಿಸಿತ್ತು ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪವನ್ ಕುಮಾರ್ ಹೇಳಿದ್ದಾರೆ. ತನಿಖೆಯ ಸಂದರ್ಭ ಬಾಲಕನ 14 ವರ್ಷದ ಗೆಳೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜಸಿದಿಹ್ ಪೊಲೀಸ್ ಠಾಣಾ ಪ್ರದೇಶದ ರೋಹಿಣಿ ಗ್ರಾಮದಲ್ಲಿರುವ ಮನೆಯ ಹೊರಗೆ ಮಂಗಳವಾರ ರಾತ್ರಿ 8.30ಕ್ಕೆ ತಾನು ಆತನನ್ನು ಭೇಟಿಯಾಗಿದ್ದೆ. ಅನಂತರ ನಾವಿಬ್ಬರು 19 ವರ್ಷದ ಇನ್ನೋರ್ವ ಗೆಳೆಯ ಅವಿನಾಶ್ನನ್ನು ಭೇಟಿಯಾಗಲು ಕುಮಾರಾಬಾದ್ ಸ್ಟೇಷನ್ ರೋಡ್ಗೆ ತೆರಳಿದೆವು ಎಂದು ವಶದಲ್ಲಿರುವ ಬಾಲಕ ಹೇಳಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಮೂವರೂ ಪಾಲಂಗಾ ಪಹಾಡ್ ಕಾಡಿನತ್ತ ತೆರಳಿದ್ದರು. ಈ ಸಂದರ್ಭ ಬಾಲಕ ಹಾಗೂ ಅವಿನಾಶ್ ನಡುವೆ ವಾಗ್ವಾದ ನಡೆದಿದೆ. ಕೂಡಲೇ ಅವಿನಾಶ್ ಚಾಕು ತೆಗೆದು ಬಾಲಕನಿಗೆ ಇರಿದು, ಆತನ ಕತ್ತು ಕೊಯ್ದ ಹತ್ಯೆ ನಡೆಸಿದ್ದಾನೆ. ಅನಂತರ ಆತನ ಕೈ ಹಾಗೂ ಕಾಲುಗಳನ್ನು ಕತ್ತರಿಸಿದ್ದಾನೆ. ದೇಹದ ಭಾಗಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ ಕಾಡಿನಲ್ಲಿ ಎಸೆದಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಪೊಲೀಸರು ಬಾಲಕನ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ ಹಾಗೂ ಅವಿನಾಶ್ನನ್ನು ಬಂಧಿಸಿದ್ದಾರೆ ಎಂದು ಕುಮಾರ್ ತಿಳಿಸಿದ್ದಾರೆ.







