ಆದಿತ್ಯ ಠಾಕ್ರೆಗೆ ಬೆದರಿಕೆ ಸಂದೇಶ: ಬೆಂಗಳೂರಿನಿಂದ ಆರೋಪಿಯ ಬಂಧನ

ಮುಂಬೈ, ಡಿ. 23: ಮಹಾರಾಷ್ಟ್ರದ ಸಂಪುಟ ಸಚಿವ ಆದಿತ್ಯ ಠಾಕ್ರೆ ಅವರಿಗೆ ಬೆದರಿಕೆ ಸಂದೇಶ ರವಾನಿಸಿದ ಆರೋಪದಲ್ಲಿ ಮುಂಬೈ ಪೊಲೀಸರು ವ್ಯಕ್ತಿಯೋರ್ವರನ್ನು ಬೆಂಗಳೂರಿನಿಂದ ಬಂಧಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಇತರರಿಗೆ ಬೆದರಿಕೆ ಒಡ್ಡುವ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರೂಪಿಸಲಾಗುವುದು ಹಾಗೂ ಇಂತಹ ಪ್ರಕರಣಗಳನ್ನು ನಿರ್ವಹಿಸಲು ನೀತಿಯೊಂದನ್ನು ರಚಿಸಲಾಗುವುದು ಎಂದು ಮಹಾರಾಷ್ಟ್ರ ಸರಕಾರ ಗುರುವಾರ ಘೋಷಿಸಿದೆ. ವಿಧಾನ ಸಭೆಯಲ್ಲಿ ಮಾತನಾಡಿದ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಲ್ಸೆ ಪಾಟೀಲ್ ಅವರು, ಆದಿತ್ಯ ಠಾಕ್ರೆ ಅವರಿಗೆ ಬೆದರಿಕೆ ಒಡ್ಡಿದ ವ್ಯಕ್ತಿಯನ್ನು ಜೈಸಿಂಗ್ ರಜಪೂತ್ ಎಂದು ಗುರುತಿಸಲಾಗಿದೆ. ಆತನನ್ನು ಮುಂಬೈ ಕ್ರೈಮ್ ಬ್ರಾಂಚ್ನ ಸೈಬರ್ ಕ್ರೈಮ್ ತಂಡ ಕರ್ನಾಟಕದ ಬೆಂಗಳೂರಿನಿಂದ ಬಂಧಿಸಿದೆ ಹಾಗೂ ಮುಂಬೈಗೆ ಕರೆದುಕೊಂಡು ಬಂದಿದೆ ಎಂದಿದ್ದಾರೆ. ರಜಪೂತ್ ಡಿಸೆಂಬರ್ 8ರಂದು ಆದಿತ್ಯ ಠಾಕ್ರೆಗೆ ಕರೆ ಮಾಡಿದ್ದ. ಆದರೆ, ಅವರು ಕರೆ ಸ್ವೀಕರಿಸಿರಲಿಲ್ಲ. ಅನಂತರ ಆತ ಸಚಿವರಿಗೆ ಬೆದರಿಕೆಯ ಪಠ್ಯ ಸಂದೇಶ ರವಾನಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.